13 ಆಪ್ ಶಾಸಕರನ್ನು ಬಂಧಿಸಿದ್ದು ಏಕೆ ಎಂದು ದಿಲ್ಲಿ ಪೊಲೀಸರಿಗೇ ಗೊತ್ತಿಲ್ಲ !

Update: 2017-01-23 13:54 GMT

ಹೊಸದಿಲ್ಲಿ,ಜ.23: ದಿಲ್ಲಿಯ ಎಎಪಿ ಸರಕಾರ ಹಾಗೂ ಕೇಂದ್ರ ಸರಕಾರದ ಆಧೀನದಲ್ಲಿರುವ ರಾಜಧಾನಿಯ ಪೊಲೀಸರ ನಡುವೆ ಕಳೆದ ಎರಡು ವರ್ಷಗಳಿಂದ ಹದಗೆಟ್ಟಿರುವ ಬಾಂಧವ್ಯ ಇದೀಗ ಇನ್ನಷ್ಟು ವಿಷಮಿಸಿದೆ. ದಿಲ್ಲಿ ಪೊಲೀಸರು ತನ್ನ ಶಾಸಕರಿಗೆ ಕಿರುಕುಳ ನೀಡುತ್ತಿದ್ದಾರೆ ಹಾಗೂ ಅವರ ಬೇಟೆಯಲ್ಲಿ ತೊಡಗಿದೆಯೆಂದು ಎಎಪಿ ಸೋಮವಾರ ಆಪಾದಿಸಿದೆ. ಲೈಂಗಿಕ ಕಿರುಕುಳ,ಗಲಭೆ, ಅಪಹರಣ ಹಾಗೂ ಫೋರ್ಜರಿ ಮತ್ತಿತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಈವರೆಗೆ ಆಮ್ ಆದ್ಮಿ ಪಕ್ಷದ 13 ಶಾಸಕರನ್ನು ಬಂಧಿಸಿದ್ದರು. ಆದರೆ ಅವರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ನ್ಯಾಯಾಲಯಕ್ಕೆ ವಿವರಣೆ ನೀಡಲು ಸಾಧ್ಯವಾಗದೆ ಪೊಲೀಸರು ಪೇಚಿಗೆ ಸಿಲುಕಿದ್ದಾರೆಮಂದು ಇಂಗ್ಲೀಷ್ ದಿನಪತ್ರಿಕೆಯೊಂದು ವರದಿ ಮಾಡಿದೆ.

   ಬಂಧಿತರಾದ 13 ಮಂದಿ ಶಾಸಕರ ಪೈಕಿ ಓರ್ವನನ್ನು ದೋಷಮುಕ್ತಗೊಳಿಸಲಾಗಿದ್ದು, ಇತರರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಶಾಸಕರಾದ ಸಂದೀಪ್ ಕುಮಾರ್ (ಅತ್ಯಾಚಾರ ಆರೋಪಿ) ಹಾಗೂ ಜೀತೇಂದರ್ ತೋಮಾರ್ (ಪದವಿ ಶಿಕ್ಷಣ ಪ್ರಮಾಣಪತ್ರದ ಫೋರ್ಜರಿ) ಅವರನ್ನು ಹೊರತುಪಡಿಸಿ, ಉಳಿದ 11 ಮಂದಿ ಎಎಪಿ ಶಾಸಕರು ಜಾಮೀನು ಬಿಡುಗಡೆಗೆ ಮೊದಲು ಒಂದು ವಾರಕ್ಕೂ ಹೆಚ್ಚು ಸಮಯವನ್ನು ಜೈಲಿನಲ್ಲಿ ಕಳೆದಿದ್ದರು. ಕುಮಾರ್ ಎರಡು ತಿಂಗಳು ಜೈಲಿನಲ್ಲಿದ್ದರೆ, ತೋಮಾರ್ ಮೂರು ವಾರ ಸೆರೆಮನೆ ವಾಸ ಅನುಭವಿಸಿದ್ದರು.

  ಇವರ ಪೈಕಿ ಹೆಚ್ಚಿನ ಶಾಸಕರು ಎರಡನೆ ಆಲಿಕೆಯ ಬಳಿಕ ಜಾಮೀನು ಬಿಡುಗಡೆ ಪಡೆದಿದ್ದರು. ಹಲವು ಪ್ರಕರಣಗಳಲ್ಲಿ ಶಾಸಕರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ನ್ಯಾಯಾಲಯವು ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News