ರಾಜನಾಥ್ ಸಿಂಗ್ ಪುತ್ರನಿಗೆ ಟಿಕೆಟ್ ಬಿಜೆಪಿ ಮುಖಂಡರ ಸಮರ್ಥನೆ

Update: 2017-01-23 14:06 GMT

ಲಕ್ನೊ, ಜ.23: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅರ್ಹರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ನೋಯ್ಡೊದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರಾಜನಾಥ್ ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ ಶೇಕಡಾ 200ರಷ್ಟು ಅರ್ಹನಾಗಿರುವ ಕಾರಣ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಉತ್ತರಪ್ರದೇಶ ಬಿಜೆಪಿ ಮುಖ್ಯಸ್ಥ ಓಂ ಮಾಥುರ್ ಹೇಳಿದ್ದಾರೆ. ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿರಿಯ ಮುಖಂಡರ ಮಕ್ಕಳಿಗೆ ಟಿಕೆಟ್ ನೀಡಿರುವ ಪಕ್ಷದ ನಿರ್ಧಾರವನ್ನು ಅವರು ಸಮರ್ಥಿಸಿದರು.

   ಈ ಹಿಂದಿನ ಚುನಾವಣೆ ವೇಳೆ ತನ್ನ ಪುತ್ರ ಪಂಕಜ್ ಸಿಂಗ್‌ಗೆ ಸ್ಪರ್ಧಿಸಲು ಅವಕಾಶ ನೀಡದಿರುವ ಬಗ್ಗೆ ರಾಜನಾಥ್ ಸಿಂಗ್ ಅಸಮಾಧಾನಗೊಂಡಿದ್ದು ಈ ಬಾರಿ ತನ್ನ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಒತ್ತಡ ಹೇರಿದ್ದಾರೆ ಎಂಬ ವರದಿ ಸುಳ್ಳು ಎಂದು ಮಾಥುರ್ ಹೇಳಿದರು. ಪಂಕಜ್ ರಾಜ್ಯ ಬಿಜೆಪಿ ಸಮಿತಿಯ ಪದಾಧಿಕಾರಿ. ಅಲ್ಲದೆ 15 ವರ್ಷಗಳಿಂದ ಸದಸ್ಯನಾಗಿದ್ದವರು. ಅವರು ಟಿಕೆಟ್ ಪಡೆಯಲು ಶೇ.200ರಷ್ಟು ಅರ್ಹತೆ ಹೊಂದಿದ್ದಾರೆ ಎಂದವರು ನುಡಿದರು.

ಉತ್ತರಪ್ರದೇಶದಲ್ಲಿ ಬಿಜೆಪಿ ವಂಶಪಾರಂಪರ್ಯ ನೀತಿ ಅನುಸರಿಸುತ್ತಿದೆ ಎಂಬ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ಟೀಕೆಗೆ ಉತ್ತರಿಸಿದ ಮಾಥುರ್, ಬಿಜೆಪಿ ಪರ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸಿದವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಬಿಜೆಪಿ ಹಿರಿಯ ಸದಸ್ಯ ಲಾಲ್‌ಜಿ ಟಂಡನ್ ಪುತ್ರ ಗೋಪಾಲ್ ಟಂಡನ್ ಹಾಲಿ ಶಾಸಕರಾಗಿದ್ದು ಅವರನ್ನು ಮರಳಿ ಕಣಕ್ಕೆ ಇಳಿಸಲಾಗಿದೆ ಎಂದರು.

 ಪಕ್ಷಕ್ಕೆ ಇತ್ತೀಚೆಗಷ್ಟೇ ಸೇರಿದವರನ್ನು ಅಭ್ಯರ್ಥಿ ಎಂದು ಘೋಷಿಸಲಾಗುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ಬಿಡುಗಡೆಗೊಳಿಸಿದ 149 ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ ಸುಮಾರು 24ರಷ್ಟು ಮಂದಿ ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಗೊಂಡವರು. ಕಾಂಗ್ರೆಸ್‌ನಲ್ಲಿ 24 ವರ್ಷ ಸದಸ್ಯರಾಗಿದ್ದ ರೀಟಾ ಬಹುಗುಣ ಜೋಷಿ ಅವರು ಮೂರು ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲದೆ ಇತ್ತೀಚೆಗಷ್ಟೇ ಬಿಎಸ್‌ಪಿ ತೊರೆದು ಬಿಜೆಪಿ ಪಾಳಯಕ್ಕೆ ಜಿಗಿದಿರುವ ಬೃಜೇಶ್ ಪಾಠಕ್ ಅವರಿಗೂ ಟಿಕೆಟ್ ಲಭಿಸಿದೆ. ಇಬ್ಬರೂ ಪ್ರತಿಷ್ಠಿತ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಈ ಬಗ್ಗೆ ಉತ್ತರಿಸಿದ ಮಾಥುರ್, ಬಿಜೆಪಿ ಕಾರ್ಯಕರ್ತರ ಮನವೊಲಿಸಿದ ಬಳಿಕವಷ್ಟೇ ‘ಹೊರಗಿನವರಿಗೆ’ ಟಿಕೆಟ್ ನೀಡಲಾಗುತ್ತಿದೆ. ಇತ್ತೀಚೆಗೆ ಪಕ್ಷ ಸೇರಿದವರ ಪೈಕಿ 30ರಿಂದ 40 ಮಂದಿಗೆ ಮಾತ್ರ ಟಿಕೆಟ್ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News