ಮೂರು ಹೆದ್ದಾರಿ ಸುರಕ್ಷಾ ಗಸ್ತು ವಾಹನಕ್ಕೆ ಚಾಲನೆ

Update: 2017-01-23 14:24 GMT

ಉಡುಪಿ, ಜ.23: ಹೆದ್ದಾರಿ ಸುರಕ್ಷೆ ಯೋಜನೆಯಡಿ ಉಡುಪಿ ಜಿಲ್ಲಾ ಪೊಲೀಸ್ ಘಟಕಕ್ಕೆ ರಾಜ್ಯ ಸರಕಾರ ಒದಗಿಸಿದ ಮೂರು ಹೊಸ ಹೆದ್ದಾರಿ ಗಸ್ತು ಇನೋವಾ ವಾಹನಗಳಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ ಇಂದು ಎಸ್ಪಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

ಈ ಯೋಜನೆಯಡಿ ರಾಜ್ಯಾದ್ಯಂತ ಒಟ್ಟು 100 ವಾಹನಗಳು ಮಂಜೂ ರಾಗಿದ್ದು, ಅದರಲ್ಲಿ ಮೂರನ್ನು ಉಡುಪಿ ಜಿಲ್ಲೆಗೆ ಒದಗಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾತ್ರ ಕಾರ್ಯಾಚರಿಸಲಿರುವ ಈ ಮೂರು ವಾಹನಗಳು, ಜಿಲ್ಲೆಯ ಗಡಿ ಪ್ರದೇಶವಾಗಿರುವ ಹೆಜಮಾಡಿಯಿಂದ ಉದ್ಯಾವರವರೆಗೆ, ಉದ್ಯಾವರದಿಂದ ಕುಂಭಾಶಿಯವರೆಗೆ, ಕುಂಭಾಶಿಯಿಂದ ಶಿರೂರು ಗಡಿಯ ವರೆಗೆ ಗಸ್ತು ತಿರುಗಲಿವೆ. ಇವುಗಳು ಜಿಲ್ಲಾ ನಿಯಂತ್ರಣ ಕೊಠಡಿಯ ಹತೋಟಿಯಲ್ಲಿರುತ್ತವೆ ಎಂದು ಎಸ್ಪಿ ಬಾಲಕೃಷ್ಣ ತಿಳಿಸಿದರು.

ಈ ವಾಹನಗಳ ಸಂಪೂರ್ಣ ಮೇಲುಸ್ತುವಾರಿಯನ್ನು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ನಿರ್ವಹಿಸಲಿದ್ದು, ಆಯಾ ಸರಹದ್ದಿನ ಸಹಾಯಕ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಉಸ್ತುವಾರಿ ನೋಡಿ ಕೊಳ್ಳಲಿದ್ದಾರೆ. ಒಂದು ವಾಹನದಲ್ಲಿ ಚಾಲಕ, ಓರ್ವ ಸಹಾಯಕ ಪೊಲೀಸ್ ಉಪನಿರೀಕ್ಷಕರು ಹಾಗೂ ಓರ್ವ ಕಾನ್‌ಸ್ಟೇಬಲ್ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ವಾಹನವು ದಿನದ 24ಗಂಟೆಗಳ ಕಾಲವೂ ಕಾರ್ಯ ಪ್ರವೃತ್ತವಾಗಿರುತ್ತದೆ ಎಂದರು.

ವಾಹನದ ವೈಶಿಷ್ಯತೆ: ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಫೋಲ್ಡಿಂಗ್ ಸ್ಟ್ರೆಚರ್, ರೆಕಾರ್ಡಿಂಗ್ ಸೌಲಭ್ಯದ ಜೊತೆಗೆ 180ಡಿಗ್ರಿ ತಿರುಗುವ ಆಧುನಿಕ ತಂತ್ರ ಜ್ಞಾನ ಹೊಂದಿರುವ ಸಿಸಿ ಕೆಮೆರಾ, 180 ಡಿಗ್ರಿ ತಿರುಗುವ ಗರಿಷ್ಠ ಸಾಮರ್ಥ್ಯ ದ ಟಾಪ್ ಸರ್ಚ್‌ಲೈಟ್, ಮೂರು ಬಣ್ಣದ ಬಾರ್‌ಲೈಟ್ ಸೌಲಭ್ಯ, ಬಹು ಶಬ್ದಗಳನ್ನೊಳಗೊಂಡ ಪಬ್ಲಿಕ್ ಅಡ್ರೆಸ್ಸಿಂಗ್ ಸಿಸ್ಟಮ್, ಪವರ್ ಬ್ಯಾಕ್‌ಅಪ್ ನೊಂದಿಗೆ ಇನ್ವರ್ಟರ್ ಸೌಲಭ್ಯ, ಜಿಪಿಆರ್‌ಎಸ್ ಜಿಪಿಎಸ್ ಸೌಲಭ್ಯ ಹಾಗೂ ವಯರ್‌ಲೆಸ್ ಸೌಲಭ್ಯವನ್ನು ಈ ವಾಹನ ಹೊಂದಿದೆ ಎಂದು ಎಸ್ಪಿ ತಿಳಿಸಿದರು.

ರಸ್ತೆ ಅಪಘಾತ ಸಂಭವಿಸಿದರೆ ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಸ್ಪಂದಿಸುವ ಹಾಗೂ ಆಸ್ಪತ್ರೆಗೆ ಸಾಗಿಸುವ ಕೆಲಸವೂ ಮಾಡುತ್ತದೆ. ಇದರಲ್ಲಿ ತರಬೇತಿ ಪಡೆದ ಸಿಬ್ಬಂದಿಗಳು ಇರುವುದರಿಂದ ತಕ್ಷಣ ಬೇಕಾದ ಪ್ರಥಮ ಚಿಕಿತ್ಸೆಯನ್ನು ಗಾಯಾಳುಗಳಿಗೆ ನೀಡಲಿದ್ದಾರೆ. ಅಪಘಾತದ ವೇಳೆ ಮುಕ್ತ ಸಂಚಾರಕ್ಕೆ ಈ ವಾಹನದ ಸಿಬ್ಬಂದಿಗಳು ಕ್ರಮ ಕೈಗೊಳ್ಳುತ್ತಾರೆ. ಹೆದ್ದಾರಿಗಳಲ್ಲಿ ಸಂಭವಿಸಬಹುದಾದಂತಹ ದರೋಡೆ, ಸುಲಿಗೆ, ಸರಗಳ್ಳತನ, ಅಕ್ರಮ ಸಾಗಾಣಿಕೆ ಮುಂತಾದ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವಾಹನಗಳು ಕಾರ್ಯಾಚರಿಸಲಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

ರಾ.ಹೆ.ಯಲ್ಲಿ 53 ಕಡೆ ಸಿಸಿ ಕ್ಯಾಮೆರಾ

ರಾಜ್ಯ ಸರಕಾರವು ಕರಾವಳಿ ಕರ್ನಾಟಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಯೋಜನೆ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಹೆದ್ದಾರಿಯ 53 ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲು ಮಂಜೂರಾತಿ ನೀಡಿದೆ ಎಂದು ಎಸ್ಪಿ ಕೆ.ಟಿ.ಬಾಲಕೃಷ್ಣ ತಿಳಿಸಿದರು.

ಅಪರಾಧ ಹಾಗೂ ಸಂಚಾರ ನಿಯಮ ಉಲ್ಲಂಘನೆಯನ್ನು ನಿಯಂತ್ರಿಸುವ ಉದ್ದೇಶದೊಂದಿಗೆ ಅತ್ಯಾಧುನಿಕ ಹಾಗೂ ಹೈಡೆಫಿನೇಶನ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾ ವಾಹನದ ನಂಬರ್ ಮಾತ್ರವಲ್ಲದೆ ಅದರೊಳಗೆ ಕುಳಿತವರ ಚಿತ್ರೀಕರಣ ಕೂಡ ಮಾಡುತ್ತದೆ. ಇದರಿಂದ ಅಪ ರಾಧ ಎಸಗಿ ಪರಾರಿಯಾಗುವವರನ್ನು ಗುರುತಿಸಬಹುದಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News