×
Ad

ಜ.26ರಂದು ಎಸ್ಕೆಎಸ್ಸೆಸ್ಸೆಫ್‌ನಿಂದ ಮಾನವ ಸರಪಳಿ

Update: 2017-01-23 20:02 IST

ಉಪ್ಪಿನಂಗಡಿ,ಜ.23: ‘‘ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ’’ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಕೆಎಸ್ಸೆಸ್ಸೆಫ್‌ನ ದ.ಕ. ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಗಣರಾಜೋತ್ಸವ ದಿನವಾದ ಜ.26ರಂದು ಉಪ್ಪಿನಂಗಡಿಯ ‘ಎಸ್ಕೆಎಸ್ಸೆಸ್ಸೆಫ್ ಮಾನವ ಸರಪಳಿ- 2017’ ಹಾಗೂ ಬೃಹತ್ ಜಾಥಾ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಚೇರ್‌ಮೆನ್ ಹಾಜಿ ಮುಸ್ತಾಫ ಕೆಂಪಿ ತಿಳಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಕಳೆದ 10 ವರ್ಷಗಳಿಂದ ವರ್ಷಂಪ್ರತಿ ಗಣರಾಜೋತ್ಸವ ದಿನದಂದು ಪ್ರತಿ ಜಿಲ್ಲಾ ಸಮಿತಿಗಳು ಮಾನವ ಸರಪಳಿ ಹಾಗೂ ಜಾಥಾ ನಡೆಸುತ್ತಿವೆ. ಈ ಬಾರಿ ದ.ಕ. ಜಿಲ್ಲಾ ಸಮಿತಿಯ ಕಾರ್ಯಕ್ರಮವನ್ನು ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಶೈಖುನಾ ಕೋಟುಮಲ ಬಾಪು ಉಸ್ತಾದ್ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 9:30ಕ್ಕೆ ಉಪ್ಪಿನಂಗಡಿ ಬಳಿಯ ಕೂಟೇಲು ಬಳಿ ದರ್ಗಾ ಝಿಯಾರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

10ಕ್ಕೆ ಅಸೈಯ್ಯದ್ ಅನಸ್ ತಂಙಳ್ ಗಂಡಿಬಾಗಿಲು ರಾಷ್ಟ್ರಧ್ವಜಾರೋಹಣಗೈಯಲಿದ್ದಾರೆ. ಮಧ್ಯಾಹ್ನ 3ಕ್ಕೆ 34ನೇ ನೆಕ್ಕಿಲಾಡಿಯಿಂದ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಜಾಥಾವನ್ನು ಅಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಆತೂರು ಉದ್ಘಾಟಿಸಿದ್ದಾರೆ. ಸಂಜೆ 4ಕ್ಕೆ ಕಾಲೇಜು ಮೈದಾನದಲ್ಲಿ ಮಾನವ ಸರಪಳಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದು, ಪುತ್ತೂರು ಜಂ- ಇಯ್ಯತುಲ್ ಉಲಮಾದ ಅಧ್ಯಕ್ಷ ಅಲ್ಹಾಜ್ ಅಸೈಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ. ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಹಾಫಿಳ್ ಮುಹಮ್ಮದ್ ತ್ವಯ್ಯಿಬ್ ಅಲ್ ಖಾಸಿಮಿ ಕಿರಾಅತ್ ಪಠಿಸಲಿದ್ದು, ಅರಣ್ಯ ಸಚಿವ ಬಿ. ರಮಾನಾಥ ರೈ ಉದ್ಘಾಟನೆ ನೆರವೇರಿಸಲಿದ್ದಾರೆ.

ಮಂಗಳನಗರದ ಶಂಸುಲ್ ಉಲಮಾ ದಾರುಸ್ಸಲಾಮ್ ಅರಬಿಕ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಗೀತೆ ಆಲಾಪನೆ ಮಾಡಲಿದ್ದು, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಮುಸ್ತಫಾ ಅಶ್ರಫಿ ಕಕ್ಕುಪ್ಪಡಿ, ಮಂಗಳೂರಿನ ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಖತುಲ್ಲಾ ಫೈಝಿ ಮುಖ್ಯ ಭಾಷಣ ಮಾಡಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಇಸ್‌ಹಾಕ್ ಫೈಝಿ ಪ್ರತಿಜ್ಞಾ ಬೋಧನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ಎಸ್ಕೆಎಸ್ಸೆಸ್ಸೆಫ್‌ನ ಹನ್ನೊಂದು ವಲಯಗಳಿದ್ದು, 500 ಶಾಖೆಗಳಿವೆ ಈ ಎಲ್ಲಾ ಶಾಖೆಗಳಿಂದ ನಾವು ಭಾರತ ರಾಷ್ಟ್ರಪ್ರಿಯ ಜನಾಂಗವನ್ನು ರೂಪಿಸುವ ಕಾರ್ಯ ನಡೆಯುತ್ತಿದ್ದು, ಎಸ್ಕೆಎಸ್ಸೆಸ್ಸೆಫ್ ಎಲ್ಲರೊಡನೆ ಒಂದಾಗಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವ ಸಂಸ್ಥೆಯಾಗಿದೆ. ನಮ್ಮ ಈ ಕಾರ್ಯಕ್ರಮಕ್ಕೆ 5,000ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ ಎಂದ ಹಾಜಿ ಮುಸ್ತಾಫ ಕೆಂಪಿ, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಮುಂದಾಳುಗಳಾದ ಅಶ್ರಫ್ ಕೊಳ್ಳೆಜಾಲು, ರಶೀದ್ ರಹ್ಮಾನಿ, ಕೆ.ಎಂ.ಎ. ಕೊಡುಂಗಾಯಿ, ಸಿದ್ದೀಕ್ ಫೈಝಿ, ಇ.ಕೆ. ಅಬ್ದುರ್ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News