ಭಟ್ಕಳ: ‘ಮಾನಾ’ ಸಾಹಿತ್ಯದಲ್ಲಿ ಅಂತರಂಗದ ಕಳಕಳಿ ಅಡಗಿದೆ-ಸೈಯ್ಯದ್ ಝಮಿರುಲ್ಲಾ
ಭಟ್ಕಳ,ಜ.23: ದಿವಂಗತ ‘ಮಾನಾ’ ರ ಸಾಹಿತ್ಯದಲ್ಲಿ ಜೀವನದ ಅಂತರಂಗ ಅಡಗಿದೆ ಎಂದು ಹಿರಿಯ ಸಾಹಿತಿ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಣತೆ ಸಾಹಿತ್ಯಿಕ ಸಾಂಸ್ಕೃತಿ ಜಗುಲಿ ಸಹಯೋಗದೊಂದಿಗೆ ಮುರುಡೇಶ್ವರದ ಮಾನಾಸ್ಮತಿಯಲ್ಲಿ ಜರಗಿದ ದಿವಂಗತ ಮಾನಾ ಬದುಕು ಬರಹ ಒಂದು ಮೆಲುಕು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ‘ಮಾನಾ’ ರ ಬದುಕು ಬರಹ ವಿಷಯದ ಕುರಿತು ಮಾತನಾಡುತ್ತಿದ್ದರು.
ಅನೇಕ ಹಿರಿಯರು ಸಾಹಿತ್ಯವನ್ನು ರಚಿಸಿದವರಿದ್ದಾರೆ, ಆದರೆ ಅವರ ನಂತರ ಅವುಗಳನ್ನು ಬೆಳಕಿಗೆ ತಂದವರು ಬಹಳ ವಿರಳ. ಆದರೆ ಇಲ್ಲ ಹಾಗಾಗಲಿಲ್ಲ, ತಮ್ಮ ತಂದೆಯವರ ಬರಹಗಳನ್ನು ಬೆಳಕಿಗೆ ತರುತ್ತಿರುವ ಮಾನಾಸುತರ ಕಾರ್ಯ ಶ್ಲಾಘನೀಯವಾದದ್ದು ಎಂದರು.
‘ಮಾನಾ’ರವರ ಪ್ರತಿಯೊಂದು ಸಾಹಿತ್ಯದಲ್ಲಿಯೂ ಕೂಡಾ ಅವರ ಅಂತರಂಗದ ಕಳಕಳಿ ಕಾಣಿಸುತ್ತದೆ. ಅವರು ಬರೆದ ಹಲವಾರು ಕೃತಿಗಳು ಅಂದಿನ ಅತ್ಯುತ್ತಮ ಪತ್ರಿಕೆಗಳು, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ ಎನ್ನುವುದು ಹೆಮ್ಮೆಯ ಸಂಗತಿ. ‘ಮಾನಾ’ ರ ಸಾಹಿತ್ಯಗಳನ್ನು ಹೊರತರುತ್ತಿರುವುದರೊಂದಿಗೆ ಅವರ ಸಮಗ್ರ ಸಾಹಿತ್ಯ ಗ್ರಂಥವೊಂದನ್ನು ಹೊರತರುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದ ಅವರು, ಸಾಹಿತ್ಯ, ಸಾಹಿತಿಗಳ ವಿಚಾರಗಳನ್ನು ಎಂದೂ ನಾಶಪಡಿಸಲು ಸಾಧ್ಯವಿಲ್ಲ ಎಂದು ಸಾರಿದ ಸಾಹಿತಿ ಮಾನ ಅವರ ಕಥೆಗಳು ಚಿಕ್ರಕ ಶೈಲಿಯಲ್ಲಿದ್ದು ಓದುಗರಿಗೆ ಅತ್ಯಂತ ಮುದ ನೀಡುತ್ತವೆ ಅಲ್ಲದೇ ಅವರು ಯುವ ಸಮುದಾಯಕ್ಕೆ ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮವನ್ನು ‘ಮಾನಾ’ರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರ ಮೂಲಕ ಹಿರಿಯರಾದ ಡಾ. ಐ. ಆರ್. ಭಟ್ಟ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧ ನಾಯ್ಕ ವಹಿಸಿದ್ದರು.
ಸಾಹಿತಿ ಶ್ರೀಧರ ಶೇಟ್ ಅವರು ಮಾನಾರವರ ಬದುಕು ಕುರಿತು ಮಾತನಾಡಿದರು. ಸಾಹಿತಿ ನಾರಾಯಣ ಯಾಜಿ ಮಾನಾರವರ ಒಡನಾಟದ ಕುರಿತು ಮಾತನಾಡಿ ‘ಮಾನಾ’ರವರಿಗೆ ಮರಣೋತ್ತರವಾಗಿ ದೊರೆಯುವ ಪ್ರಶಸ್ತಿಗಳು ದೊರೆಯುವಂತಾಗಬೇಕು. ಕನ್ನಡ ಸಾಹಿತ್ಯ ಪರಿಷತ್ ಮಾನಾರವರ ಹೆಸರಿನಲ್ಲಿ ಪ್ರತಿ ವರ್ಷ ಓರ್ವರನ್ನುಗೌರವಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್.ಎನ್.ಎಸ್. ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ವಿ.ಹೆಗಡೆ, ಅಂಜುಮಾನ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಜೀಮ್ ಅಂಬಾರಿ, ಸಾಹಿತಿ ಶಂಭು ಹೆಗಡೆ ಮಾತನಾಡಿದರು. ಕುಮಾರಿ ರಂಜಿತಾ ಹೆಗಡೆ ಪ್ರಾರ್ಥಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಎಂ.ಪಿ.ಭಂಡಾರಿ ಸ್ವಾಗತಿಸಿದರು. ಗಣಪತಿ ಕಾಯ್ಕಿಣಿ ಮಾನಾ ರಚಿಸಿದ ಯಕ್ಷಗಾನ ಪದ್ಯವನ್ನು ಹಾಡಿದರು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.