×
Ad

ಅಂಬಲಪಾಡಿ: ಮೂವರಿಗೆ ಯಕ್ಷ ಪ್ರಶಸ್ತಿ ಪ್ರದಾನ

Update: 2017-01-23 20:28 IST

ಉಡುಪಿ, ಜ.23: ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 59ನೇ ವಾರ್ಷಿಕೋತ್ಸವ ರವಿವಾರ ಕರ್ಣಾಟಕ ಬ್ಯಾಂಕಿನ ಎಜಿಎಂ ವಿದ್ಯಾಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ಅಂಬಲಪಾಡಿಯಲ್ಲಿ ನಡೆಯಿತು.

  ಈ ಸಂದರ್ಭದಲ್ಲಿ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ಶಾಂತಾರಾಮ ಆಚಾರ್ಯರಿಗೆ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ನಾರಾಯಣ ಶೆಟ್ಟಿಗಾರ್‌ಗೆ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಕೂರಾಡಿ ಸದಾಶಿವ ಕಲ್ಕೂರರಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ್ ಪ್ರದಾನ ಮಾಡಿದರು.

ಪ್ರತಿ ಪ್ರಶಸ್ತಿ 7000ರೂ. ಮೊತ್ತವನ್ನು ಒಳಗೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಬಲ್ಲಾಳರು, ಅಂಬಲಪಾಡಿ ಯಕ್ಷಗಾನ ಮಂಡಳಿ ಉಳಿದ ಸಂಸ್ಥೆಗಳಿಗೆ ಮಾದರಿ ಎಂಬಂತೆ ಕಲಾಸೇವೆ ಮಾಡುತ್ತಿದ್ದು, ಮುಂದೆ ನಡೆಯುವ ವಜ್ರಮಹೋತ್ಸವಕ್ಕೆ ದೇವಳದ ಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಕ್ಷ್ಮೀ ಮಾತನಾಡಿ, ಯಕ್ಷಗಾನ ಸರ್ವಾಂಗ ಪರಿಪೂರ್ಣ ಕಲೆಯಾಗಿದ್ದು, ಈ ಕಲೆಯ ಬೆಳವಣಿಗೆಗಾಗಿ ಕರ್ಣಾಟಕ ಬ್ಯಾಂಕ್ ನಿರಂತರ ಆರ್ಥಿಕ ನೆರವು ನೀಡುತ್ತಾ ಬಂದಿದೆ ಎಂದರು.

 ಅತಿಥಿಗಳಾಗಿ ಕೆಎಂಸಿಯ ಜೆನೆಟಿಕ್ಸ್ ವಿಭಾಗ ಮುಖ್ಯಸ್ಥ ಡಾ. ಗಿರೀಶ್ ಕಟ್ಟಾ, ಕನ್ನಡ ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಹಾಗೂ ಕೆಎಂಸಿ ಸಹಾಯಕ ಪ್ರೊಪೆಸರ್ ವಸುಮತಿ ಭಾಗವಹಿಸಿದ್ದರು. ಸನ್ಮಾನಿತ ಪರವಾಗಿ ಕೂರಾಡಿ ಸದಾಶಿವ ಕಲ್ಕೂರ ಮಾತನಾಡಿ, ಮುಂದಿನ ವರ್ಷದಿಂದ ತನ್ನ ಪತ್ನಿ ಯಶೋದಾ ಎಸ್. ಕಲ್ಕೂರ ಹೆಸರಿನಲ್ಲಿ ಪ್ರಶಸ್ತಿಯನ್ನು ತನ್ನ ಮಕ್ಕಳು ಸ್ಥಾಪಿಸುವ ಘೋಷಣೆ ಮಾಡಿದರು.

 ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿದರು. ಕೋಶಾಧಿಕಾರಿ ನಟರಾಜ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಕೆ.ಜೆ. ಕೃಷ್ಣ ವರದಿ ವಾಚಿಸಿದರು. ಕೆ. ಅಜಿತ್ ಕುಮಾರ್ ವಂದಿಸಿದರು. ಕಾರ್ಯಕ್ರಮ ದ ಬಳಿಕ ಮಂಡಳಿಯ ಬಾಲ ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News