ಕದ್ರಿ-ನಂತೂರು: ಸ್ವಾಮಿ ವಿವೇಕಾನಂದ ರಸ್ತೆ; ರೂಪಾ ಬಂಗೇರ ಪುನರುಚ್ಛಾರ
ಮಂಗಳೂರು,ಜ.23: ಕದ್ರಿ ಸರ್ಕ್ಯೂಟ್ ಹೌಸ್ ಮುಂಭಾಗದಿಂದ ನಂತೂರುವರೆಗಿನ ರಸ್ತೆ ಸ್ವಾಮಿ ವಿವೇಕಾನಂದ ರಸ್ತೆಯಾಗಿದೆ. ಅದು ಜೋಗಿ ಮಠ ರಸ್ತೆಯಲ್ಲ ಎಂದು ಮಂಗಳೂರು ಮನಪಾ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರಾ ಪುನರುಚ್ಛರಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ರಿ ಜೋಗಿ ಮಠಾಧಿಪತಿಯಿಂದ ಉದ್ಘಾಟನೆಗೊಂಡ ಸ್ವಾಮಿ ವಿವೇಕಾನಂದ ರಸ್ತೆಯ ನಾಮಲಕ ಕೆಲವೇ ಗಂಟೆಯಲ್ಲಿ ಕಿತ್ತೆಸೆಯಲಾಗಿತ್ತು. ಇದರ ಹಿಂದೆ ಮೇಯರ್‌ರ ಕುಮ್ಮಕ್ಕು ಇದೆ. 1963ರ ಮೇ 7ರಂದು ಅಂದಿನ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಎಂಬ ಹೆಸರು ಅಂಗೀಕಾರಗೊಂಡು ದಾಖಲೆಗೆ ಸೇರ್ಪಡೆಯಾಗಿದೆ. ಹಿರಿಯರಾದ ಬ್ಲೇಸಿಯಸ್ ಡಿಸೋಜ, ಎಂ.ಎಸ್.ಒಕ್ಟೋವಿಯಾ ಅಲ್ಬುಕರ್ಕ್, ಸಿ.ಜಿ.ಕಾಮತ್ ಸಹಿತ 30 ಮಂದಿ ಲೀಗಲ್ ಕಮಿಟಿಯಲ್ಲಿದ್ದವರು. ಮೇಯರ್ ತನ್ನ ತಪ್ಪನ್ನು ಒಪ್ಪಿಕೊಂಡು ತಕ್ಷಣ ನಾಮಲಕವನ್ನು ಅಳವಡಿಸಬೇಕು. ಇಲ್ಲವಾದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಉಪಮೇಯರ್ ಸುಮಿತ್ರಾ ಕರಿಯ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ನವೀನ್‌ಚಂದ್ರ, ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ಕೊಟ್ಟಾರದಲ್ಲಿ ಅನಧಿಕೃತ ಹೆಸರು?
ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಇತ್ತೀಚೆಗೆ ಕೊಟ್ಟಾರದಲ್ಲಿ ರಸ್ತೆಯೊಂದಕ್ಕೆ ಉಳ್ಳಾಲ ಮಂಜಪ್ಪ ಅವರ ಹೆಸರನ್ನು ಇಟ್ಟಿದ್ದಾರೆ. ಮಂಜಪ್ಪರ ಹೆಸರು ಇಟ್ಟದ್ದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಪಾಲಿಕೆಯಲ್ಲಿ ತೀರ್ಮಾನವಾಗದೆ ಅವರು ಹೆಸರು ಇಟ್ಟದ್ದಾದರೂ ಹೇಗೆ? ಮೇಯರ್ ಈ ಬಗ್ಗೆ ಯಾಕೆ ವೌನ ವಹಿಸಿದ್ದಾರೆ ಎಂದು ರೂಪಾ ಡಿ. ಬಂಗೇರಾ ಪ್ರಶ್ನಿಸಿದರು.