ಗೋಳ್ತಮಜಲು: ಎರಡು ಗುಂಪುಗಳ ನಡುವೆ ಹೊಡೆದಾಟ - ಮೂವರಿಗೆ ಗಾಯ

Update: 2017-01-23 16:19 GMT

ಬಂಟ್ವಾಳ, ಜ. 23: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಕಲ್ಲಡ್ಕ ಸಮೀಪದ ಗೋಳ್ತಮಜಲಿನಲ್ಲಿ ಸೋಮವಾರ ಸಂಜೆ ನಡೆದಿದ್ದು, ಘಟನೆಯಿಂದ ಮೂವರು ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಾಳುಗಳಾದ ಟಾಟಾ ಏಸ್ ವಾಹನದಲ್ಲಿದ್ದ ಜಗದೀಶ್ ಮತ್ತು ಸುನಿಲ್ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪಿಕಪ್ ಜೀಪ್ ಚಾಲಕ ಅಬ್ಬಾಸ್ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಸಂಜೆ ಕಲ್ಲಡ್ಕ ಸಮೀಪದ ಗೊಳ್ತಮಜಲುವಿನ ಬೋಳಂತೂರು ಕ್ರಾಸ್ ಎಂಬಲ್ಲಿ ಈ ಘಟನೆ ನಡೆದಿದೆ. ವಾಹನವೊಂದಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಟಾಟಾ ಏಸ್ ಹಾಗೂ ಪಿಕಪ್ ಚಾಲಕರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಹೊಕೈವರೆಗೂ ಮುಂದುವರಿದಿತ್ತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೆ ಉಭಯ ಕೋಮುಗಳ ಜನ ಸ್ಥಳದಲ್ಲಿ ಜಮಾಯಿಸಿದ್ದರಲ್ಲದೆ ಅವರ ನಡುವೆಯೂ ಹಲ್ಲೆ-ಪ್ರತಿಹಲ್ಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಘಟನೆಯಿಂದ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದ್ದು, ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಎಸ್ಪಿ ಪರಿಶೀಲನೆ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿವೈಎಸ್ಪಿ ರವೀಶ್‌ರವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಸ್ತ್ ಕಲ್ಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News