ಪತ್ರಕರ್ತನಿಗೆ ಕೊಲೆ ಬೆದರಿಕೆ : ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Update: 2017-01-23 16:43 GMT

ಬಂಟ್ವಾಳ, ಜ. 23: ಸಾಮಾಜಿಕ ತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿ ವರದಿ ಮಾಡಿರುವ ಪತ್ರಕರ್ತನಿಗೆ ಪ್ರಕರಣದ ಆರೋಪಿಯೊಬ್ಬ ದೂರವಾಣಿ ಮೂಲಕ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಕಾನತ್ತಡ್ಕ ನಿವಾಸಿ ಆರೀಸ್ ಎಂಬಾತ ಪತ್ರಕರ್ತನಿಗೆ ಬೆದರಿಕೆ ಒಡ್ಡಿರುವ ಆರೋಪಿ. ಈತನ ವಿರುದ್ಧ ವಿಟ್ಲದ ಪತ್ರಕರ್ತ ಮುಹಮ್ಮದ್ ಅಲಿ ದೂರು ನೀಡಿದ್ದಾರೆ.

ಆರೋಪಿ ಆರೀಸ್ ಹಾಗೂ ಆತನ ಸ್ನೇಹಿತ ವಿದೇಶದಲ್ಲಿದ್ದುಕೊಂಡು ಸಾಮಾಜಿಕ ಜಾಲತಾಣದಲ್ಲಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಅವಹೇಳಕಾರಿಯಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ನಿಝಾರ್ ಎಂಬವರು ಸುಮಾರು ಮೂರು ತಿಂಗಳ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೀಸ್‌ನ ಸ್ನೇಹಿತ ಇತ್ತೀಚೆಗೆ ವಿದೇಶದಿಂದ ಊರಿಗೆ ಬಂದಿರುವ ಮಾಹಿತಿ ಅರಿತ ವಿಟ್ಲ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ಬಳಿಕ ಬಿಡುಗಡೆಗೊಳಿಸಿದ್ದರು.

ಈ ಬಗ್ಗೆ ವಿಟ್ಲದ ಪತ್ರಕರ್ತ ಮುಹಮ್ಮದ್ ಅಲಿ ಪತ್ರಿಕೆಗೆ ವರದಿ ಮಾಡಿದ್ದರು. ವರದಿ ಪ್ರಕಟಗೊಂಡ ದಿನ ಅಬುದಾಭಿಯಲ್ಲಿರುವ ಆರೋಪಿ ಕಾನತ್ತಡ್ಕ ಆರೀಸ್ ತನಗೆ ಮೊಬೈಲ್ ಕರೆ ಮಾಡಿ ಹಾಗೂ ವಾಟ್ಸ್‌ ಆ್ಯಪ್ ಸಂದೇಶದಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಮುಹಮ್ಮದ್ ಅಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಗೆ ಮಾಹಿತಿ ನೀಡಿದ್ದು, ಅವರ ಸೂಚನೆಯ ಮೇರೆಗೆ ಆರೋಪಿ ಕಾನತ್ತಡ್ಕ ಆರೀಸ್ ವಿರುದ್ಧ ಪ್ರಕರಣ ದಾಖಸಿರುವ ವಿಟ್ಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಖಂಡನೆ: ಅವಹೇಳನಕಾರಿಯಾಗಿ ನಿಂಧಿಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ವಿಟ್ಲದ ಪತ್ರಕರ್ತ ಮುಹಮ್ಮದ್ ಅಲಿಗೆ ಪ್ರಕರಣದ ಆರೋಪಿ ಆರೀಸ್ ಎಂಬಾತ ವಿದೇಶದಿಂದ ಕರೆ ಮತ್ತು ವಾಟ್ಸ್‌ ಆ್ಯಪ್ ಸಂದೇಶದ ಮೂಲಕ ಬೆದರಿಕೆ ಒಡ್ಡಿರುವುದನ್ನು ಬಂಟ್ವಾಳ ಕಾರ್ಯನಿರತರ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ನಿರಂತರವಾಗಿ ಪತ್ರಕರ್ತರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಲಾಗುತ್ತಿದೆ. ತಕ್ಷಣವೇ ಆರೋಪಿಯನ್ನು ಬಂಧಿಸುವಂತೆ ಸಂಘದ ಅಧ್ಯಕ್ಷ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News