ಕರ್ಣಾಟಕ ಬ್ಯಾಂಕ್ 313.89 ಕೋಟಿ ರೂ ನಿವ್ವಳ ಲಾಭ ; ಬ್ಯಾಂಕ್ ಸದೃಢ - ಪಿ .ಜಯರಾಮಭಟ್
ಮಂಗಳೂರು,ಜ.23:ಕರ್ಣಾಟಕ ಬ್ಯಾಂಕ್ 2016ರ ಅಂತ್ಯದಲ್ಲಿ ಒಟ್ಟು ಒಂಬತ್ತು ತಿಂಗಳ ಅಂತ್ಯದಲ್ಲಿ 313.89 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.ಹಾಲಿ ಆರ್ಥಿಕ ವರ್ಷದ ಮೂರನೆ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ 68.52 ಕೋಟಿ ರೂ ಲಾಭ ಗಳಿಸಿದೆ.‘‘ಪ್ರಸಕ್ತ ಆರ್ಥಿಕ ವರ್ಷದ ಮೂರನೆ ತ್ರೈಮಾಸಿಕ ಅವಧಿ ಕ್ಲಿಷ್ಟಕರವಾಗಿದ್ದರೂ ಹಣದ ಅಪ ನಗದೀಕರಣದಿಂದ ಬ್ಯಾಂಕುಗಳ ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಬೀರಿದ್ದರೂ ಕರ್ಣಾಟಕ ಬ್ಯಾಂಕ್ ಮೂರನೆ ತ್ರೈಮಾಸಿಕ ಪ್ರಗತಿ ಸಾಧಿಸಿರುವುದು ಬ್ಯಾಂಕ್ ಸದೃಢವಾಗಿರುವುದಕ್ಕೆ ಸಾಕ್ಷಿಯಾಗಿದೆ ’’ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್ ತಿಳಿಸಿದ್ದಾರೆ.
ಅವರು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಮೂರನೆ ತ್ರೈಮಾಸಿಕ ಆರ್ಥಿಕ ಪ್ರಗತಿ ವಿವರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಳೆದ ವರ್ಷದಲ್ಲಿ ಡಿಸೆಂಬರ್ ಅಂತ್ಯದಲ್ಲಿ ಬ್ಯಾಂಕ್ 308.50 ಕೋಟಿ ರೂ ಲಾಭ ಗಳಿಸಿತ್ತು.ಮೂರನೆ ತ್ರೈಮಾಸಿಕ ಅವಧಿಯಲ್ಲಿ 96.91 ಕೋಟಿ ರೂ ಲಾಭ ಗಳಿಸಿತ್ತು.ಬ್ಯಾಂಕಿನ ನಿರ್ವಹಣಾ ಲಾಭ ಕಳೆದ ಬಾರಿಗಿಂತ ಶೇ 11.06 ಏರಿಕೆಯಾಗಿದೆ.ಕಳೆದ ವರ್ಷ 600.16 ಕೋಟಿ ನಿರ್ವಹಣಾ ಲಾಭಗಳಿಕೆಯಾಗಿತ್ತು.ಈ ಬಾರಿ 666.53 ಕೋಟಿ ರೂ ಲಾಭಗಳಿಕೆಯಾಗಿದೆ.
ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ ಡಿಸೆಂಬರ್ ಅಂತ್ಯದಲ್ಲಿ 1138.45 ಕೊಟಿ ರೂಗಳಿಗೆ ಏರಿಕೆಯಾಗಿದೆ.ಕಳೆದ ಬಾರಿ ಇದೇ ಅವಧಿಯಲ್ಲಿ 943.14 ಕೋಟಿ ಆಗಿತ್ತು.ಈ ವಿಭಾಗದಲ್ಲಿ ಶೇ 20.17 ಏರಿಕೆಯಾಗಿದೆ.
ಠೇವಣಿ ಸಂಗ್ರಹ ಈ ಬಾರಿ 57,435 ಕೊಟಿ ರೂಗಳಾಗಿದೆ.ಕಳೆದ ಬಾರಿ 49,664 ಕೋಟಿ ರೂಗಳಾಗಿತ್ತು.ಠೇವಣಿ ಸಂಗ್ರಹದಲ್ಲಿ ಶೇ 15.66 ಏರಿಕೆಯಾಗಿದೆ.ಸಾಲ ನೀಡಿಕೆಯಲ್ಲಿ ಶೇ 8.68 ಏರಿಕೆಯಾಗಿದೆ.ಕಳೆದ ಬಾರಿ 32,928 ಕೋಟಿ ಗಳಾಗಿದ್ದರೆ ಈ ಬಾರಿ 35,786 ಕೋಟಿ ರೂಗಳಾಗಿದೆ.
ಬ್ಯಾಂಕಿನ ಆರ್ಥಿಕ ವ್ಯವಹಾರ ಡಿಸೆಂಬರ್ ಅಂತ್ಯದಲ್ಲಿ 93,222 ಕೋಟಿ ರೂಗಳಿಗೆ ಏರಿಕೆಯಾಗಿದೆ.ಕಳೆದ ಬಾರಿ ಇದೇ ಅವಧಿಯಲ್ಲಿ 57,435 ಕೋಟಿ ರೂ ಆರ್ಥಿಕ ವ್ಯವಹಾರ ನಡೆದಿದೆ.ಉಳಿತಾಯ ಖಾತೆಯಲ್ಲಿ ಠೇವಣಿ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.