ಕಂಬಳಕ್ಕಾಗಿ ಒತ್ತಾಯಿಸಿ ಫೆ.1ಕ್ಕೆ ಜನಾಂದೋಲನ

Update: 2017-01-23 17:13 GMT

ಉಡುಪಿ, ಜ.23: ತಮಿಳುನಾಡಿನ ಜಲ್ಲಿಕಟ್ಟು ಮಾದರಿಯಲ್ಲಿ ತುಳುನಾಡಿನ ಜನಪದ ಕ್ರೀಡೆಯಾದ ಕಂಬಳದ ಕುರಿತಂತೆ ಕಾನೂನಿನಡಿಯಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಬೇಕೆಂದು ಒತ್ತಾಯಿಸಿ ನಗರ ಯುವಮೋರ್ಚಾ ನೇತೃತ್ವದಲ್ಲಿ ಬಿಜೆಪಿಯ ವಿವಿಧ ಘಟಕಗಳು ಜನಾಂದೋಲವನ್ನು ಹಮ್ಮಿಕೊಳ್ಳಲಿವೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ್ಲಿಕಟ್ಟಿಗೆ ಹೋಲಿಸಿದರೆ ಕಂಬಳ ಎಂಬುದು ಅತೀ ಕಡಿಮೆ ಹಿಂಸೆ ಇರುವ ಜನಪದ ಕ್ರೀಡೆ. ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವೂ ಇದೆ. ಇಂದು ಕೋಣಗಳು ಕಂಬಳದಲ್ಲಿ ಮಾತ್ರ ಕಾಣಲು ಸಿಗುತ್ತವೆ. ಕಂಬಳವೇ ಇಲ್ಲದಿದ್ದರೆ ಮುಂದೆ ಕೋಣಗಳು ಕಟುಕನ ಪಾಲಾಗಲಿವೆ ಎಂದವರು ನುಡಿದರು.

ರಾಜ್ಯ ಸರಕಾರವು ತಮಿಳುನಾಡು ಸರಕಾರದಂತೆ ಕಂಬಳದ ಕುರಿತಂತೆ ವಿಶೇಷ ಮುತುವರ್ಜಿ ವಹಿಸಿ ಕೇಂದ್ರ ಸರಕಾರದೊಂದಿಗೆ ಸೇರಿ ಅದು ಮತ್ತೆ ನಡೆಯಲು ಅವಕಾಶ ಮಾಡಿಕೊಡಬೇಕು. ಈ ವರ್ಷದ ಮಟ್ಟಿಗೆ ಸುಗ್ರೀವಾಜ್ಞೆ ಹೊರಡಿಸಿ ನಂತರ ಕಾನೂನಿನ ತಿದ್ದುಪಡಿ ಮಾಡಿ ಕಂಬಳ ಶಾಶ್ವತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಘುಪತಿ ಭಟ್ ಹೇಳಿದರು.

 ಇದೇ ಜ.28ಕ್ಕೆ ಕಂಬಳಕ್ಕೆ ಒತ್ತಾಯಿಸಿ ನಡೆಯುವ ಜನಾಂದೋಲನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಕಂಬಳದ ಪರವಾಗಿ ಹೇಳಿಕೆ ನೀಡಿದ್ದು, ಉಳಿದ ಸಂಸದರೊಂದಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಸಿದ್ಧರಿದ್ದಾರೆ ಎಂದರು.

ಫೆ.1ರಂದು ಬುಧವಾರ ಬೆಳಗ್ಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ನಗರ ಯುವ ಮೋರ್ಚಾ ನೇತೃತ್ವದಲ್ಲಿ ಜನಾಂದೋಲನ ನಡೆಯಲಿದ್ದು, ಇದಕ್ಕೆ ಪಕ್ಷಬೇಧ ಮರೆತು ಎಲ್ಲರೂ ಬೆಂಬಲಿಸಬೇಕೆಂದು ರಘುಪತಿ ಭಟ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ನಿತೀಶ್ ಆಚಾರ್ಯ, ಸತೀಶ್ ನಾಯಕ್, ಸುವರ್ಧನ್ ನಾಯಕ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News