ಮಾ.1ರಿಂದ ಮಂಗಳೂರು-ಬೆಂಗಳೂರು ಹಗಲು ರೈಲು

Update: 2017-01-23 17:17 GMT
ಸಾಂದರ್ಭಿಕ ಚಿತ್ರ

ಉಡುಪಿ, ಜ.23: ಉಡುಪಿ ರೈಲ್ವೆ ಯಾತ್ರಿ ಸಂಘದ ಸತತ ಪ್ರಯತ್ನದ ಫಲವಾಗಿ ಮಂಗಳರು-ಬೆಂಗಳೂರು ನಡುವೆ ಹೊಸ ಹಗಲು ರೈಲು ಮುಂದಿನ ಮಾ.1ರಿಂದ ಪ್ರತಿದಿನ ಓಡಾಟ ನಡೆಸಲಿದೆ ಎಂದು ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ತಿಳಿಸಿದ್ದಾರೆ.

2014ರ ಜು.8ರಂದು ಪ್ರಕಟವಾದ 2013-14ನೇ ಸಾಲಿನ ಮಧ್ಯಂತರ ರೈಲ್ವೆ ಬಜೆಟ್‌ನಲ್ಲಿ ಮಂಗಳೂರು-ಬೆಂಗಳೂರು ದಿನನಿತ್ಯದ ಹಗಲು ರೈಲು ಮಂಜೂರಾಗಿತ್ತು. 2014-15ರ ದಕ್ಷಿಣ ರೈಲ್ವೆಯ ವೇಳಾಪಟ್ಟಿ ಪುಸ್ತಕದಲ್ಲಿ ರೈಲಿನ ಓಡಾಟದ ಸಮಯವೂ ನಿಗದಿಯಾಗಿ ಪ್ರಕಟಗೊಂಡಿತ್ತು. ಆದರೆ ರೈಲು ಮಾತ್ರ ತನ್ನ ಓಡಾಟವನ್ನೇ ಪ್ರಾರಂಭಿಸಲಿಲ್ಲ ಎಂದವರು ಹೇಳಿದ್ದಾರೆ.

ಈ ಬಗ್ಗೆ ಉಡುಪಿ ರೈಲ್ವೆ ಯಾತ್ರಿ ಸಂಘ ಸಂಬಂಧಪಟ್ಟ ರೈಲ್ವೆ ವಲಯದ ಅಧಿಕಾರಿಗಳಿಗೆ, ಅನಂತರ ರೈಲ್ವೆ ಮಂಡಳಿಗೆ ಹಾಗೂ ರೈಲ್ವೆ ಸಚಿವರಿಗೆ ಸತತವಾಗಿ ಪತ್ರ ಬರೆದರೂ ಯಾವುದೇ ಸಫಲತೆ ಸಿಗಲಿಲ್ಲ. ಕೊನೆಗೆ ಹತಾಶರಾದ ಡಯಾಸ್, 2015ರ ಜು.30ರಂದು ಸಂಘದ ಪರವಾಗಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ದಾಖಲಿಸಿದರು.

ಆದರೆ ವಿಚಾರಣೆಯ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಸಂಬಂಧವಿಲ್ಲದ, ಅಸಂಭದ್ಧ ಹೇಳಿಕೆಗಳನ್ನು ಕೋರ್ಟಿಗೆ ನೀಡಿ ವಿಚಾರಣೆಯನ್ನು ಮುಂದೂಡುತ್ತಲೇ ಬಂತು. ರೈಲ್ವೆ ಅಧಿಕಾರಿಗಳ ಕಾಲಹರಣದಿಂದ ಸಿಟ್ಟಿಗೆದ್ದ ನ್ಯಾಯಮೂರ್ತಿಗಳು ಅಧಿಕಾರಿಗಳನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ಮರುದಿನವೇ ಈ ರೈಲನ್ನು ಮಾ.31ರೊಳಗೆ ಆರಂಭಿಸುವುದಾಗಿ ಕೋರ್ಟಿಗೆ ಅಫಿದಾವತ್ ಸಲ್ಲಿಸಿದರು.

ಇದೀಗ ರೈಲನ್ನು ಮಾ.1ರಿಂದ ಪ್ರಾರಂಭಿಸುವುದಾಗಿ ರೈಲ್ವೆ ಅದಿಕಾರಿಗಳು ಪ್ರಕಟಿಸಿದ್ದಾರೆ. ಇದು ರೈಲ್ವೆ ಯಾತ್ರಿ ಸಂಘದ ಪ್ರಯತ್ನಕ್ಕೆ ಸಿಕ್ಕಿದ ಜಯವಾಗಿದೆ ಎಂದು ಆರ್.ಎಲ್.ಡಯಾಸ್ ಹರ್ಷ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಈಗಾಗಲೇ ಪ್ರಕಟಿಸಿದ ವೇಳಾ ಪಟ್ಟಿಯಂತೆ ಬೆಂಗಳೂರಿನಿಂದ ಬೆಳಗ್ಗೆ 8:30ಕ್ಕೆ ಹೊರಟು ಸಂಜೆ 9:15ಕ್ಕೆ ತಲುಪಲಿದೆ. ಮಂಗಳೂರಿನಿಂದ ಬೆಳಗ್ಗೆ 6:30ಕ್ಕೆ ಹೊರಟು ಸಂಜೆ 7:30ಕ್ಕೆ ಬೆಂಗಳೂರು ತಲುಪಲಿದೆ ಎಂದು ಡಯಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News