ಕಿನ್ನಿಗೋಳಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಆಗ್ರಹ

Update: 2017-01-23 17:24 GMT

ಮುಲ್ಕಿ, ಜ.23: ಕಿನ್ನಿಗೋಳಿ ಗ್ರಾಮ ಪಂಚಾಯತ್ 2016-17ನೆ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.

 ಕಸತ್ಯಾಜ್ಯ ವಿಲೇವಾರಿ, ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ, ಕ್ಯಾಶ್ ಲೆಸ್ ವ್ಯವಹರಕ್ಕೆ ಒತ್ತು, ಇಲಾಖಾಧಿಕಾರಿಗಳ ಗೈರು ಹಾಜರಿ ಮುಂತಾದ ವಿಚಾರಗಳ ಬಗ್ಗೆ ಬಂಭೀರ ಚರ್ಚೆ ನಡೆಯಿತು.

   ಕಿನ್ನಿಗೋಳಿ ಪೇಟೆಯ ಮಾರ್ಕೆಟ್ ಹಿಂಭಾಗದಲ್ಲಿ ದುರ್ವಾಸನೆ, ಕಿನ್ನಿಗೋಳಿ ಪೇಟೆಯ ಪುಟ್‌ಪಾತ್‌ನ್ನು ಅಂಗಡಿಯವರು ಆಕ್ರಮಿಸಿದ್ದು, ಅದನ್ನು ತೆರವು ಮಾಡಿಸಬೇಕು. ಕಿನ್ನಿಗೋಳಿ ಟ್ರಾಫಿಕ್ ಸಮಸ್ಯೆ, ಬಸ್ಸು ನಿಲ್ದಾಣದ ಪಾರ್ಕಿಂಗ್ ಸಮಸ್ಯೆಗಳಿಗೆ ಪರಿಹಾರ ನೀಡುವ ಟ್ರಾಫಿಕ್ ಹಾಗೂ ಪೊಲೀಸ್ ಇಲಾಖೆ ಗ್ರಾಮ ಸಭೆೆಗೆ ಹಾಜರಾಗದಿರು ಬಗ್ಗೆ ಗ್ರಾಮಸ್ಥರಾದ ವಲೇರಿಯನ್ ಸಿಕ್ವೇರಾ ಹಾಗೂ ಗಂಗಾಧರ ರಾವ್ ಆಕ್ರೋಶ ವ್ಯಕ್ತಪಡಿಸಿದರು.

  ವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಯಲ್ಲಿ ಮಾತ್ರ ಕಸ ವಿಲೇವಾರಿಯ ವ್ಯವಸ್ಥೆ ಇದೆ. ಆದರೆ, ಎಸ್.ಕೋಡಿ, ತಾಳಿಪಾಡಿ, ಎಳತ್ತೂರು, ಶಾಂತಿ ಪಲ್ಕೆ, ಗುತ್ತಕಾಡು ಪರಿಸರದಲ್ಲಿ ಇಲ್ಲ. ಎಲ್ಲರೂ ತೆರಿಗೆ ಕಟ್ಟುತ್ತಾರೆ ಇಂತಹ ತಾರತಮ್ಯ ಯಾಕೆ ಎಂದು ಪದ್ಮನೂರು ಗ್ರಾಮಸ್ಥ ಜೋಸೆಫ್ ಕ್ವಾಡ್ರಸ್ ಪ್ರಶ್ನಿಸಿದರು.

ಇದೀಗ ಮೆನ್ನಬೆಟ್ಟು ಪಂಚಾಯತ್‌ನೊಮದಿಗೆ ಜಂಟಿಯಾಗಿ ಮೆನ್ನಬೆಟ್ಟುವಿನಲ್ಲಿ ಕಸ ವಿಲೇವಾರಿ ಘಟಕದಲ್ಲಿ ಕಾರ್ಯ ನಿರ್ವಹಿಸಲ್ಪಡುತ್ತದೆ. ಮುಂದಿನ ದಿನಗಳಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ಬೆಟ್ ಸಮೀಪದ ಮಂಜಲಪಾದೆ ಎಂಬಲ್ಲಿ ಸರಕಾರದ ಮೂರುವರೆ ಎಕರೆ ಪ್ರದೇಶವನ್ನು ಕಂದಾಯ ಇಲಾಖೆಯ ಹಸ್ತಾಂತರದ ನಂತರ ಕಿನ್ನಿಗೋಳಿ ಗ್ರಾಮ ಪಂಚಾಯತ್ ಸ್ವಂತ ನೆಲೆಯಲ್ಲಿ ಕಸ ವಿಲೇವಾರಿ ಮಾಡಲಾಗುವುದು ಎಂದು ಕಿನ್ನಿಗೋಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಳಿಸಿದರು.

   ಕ್ಯಾಶ್‌ಲೆಸ್ ವ್ಯವಹಾರಕ್ಕೆ ಸರಕಾರ ಪ್ರೇರಣೆ ನೀಡುವುದರಿಂದಾಗಿ ಪಂಚಾಯತ್‌ಗಳೂ ಕರ, ಪರವಾನಿಗೆ ಹಾಗೂ ಇನ್ನಿತರ ಕಾರ್ಯಗಳಿಗೆ ಒಗ್ಗಿಕೊಳ್ಳಬೇಕಾದ್ದರಿಂದ ಗ್ರಾಮಸ್ಥರು ಈ ಬಗ್ಗೆ ಗಮನಹರಿಸಿ ಪಾರದರ್ಶಕ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಸ್ಪಂದಿಸಬೇಕು. ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು.

ಕಿನ್ನಿಗೋಳಿ ಹೊಸಕಾವೇರಿ ಎಸ್ಸಿ ಎಸ್ಟಿ ಕಾಲೋನಿಗೆ ಹೋಗುವ ರಸ್ತೆಗೆ 90ಸಾವಿರ ರೂ.ಮಂಜೂರಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಮಗಾರಿ ನಡೆದಿಲ್ಲ. ಇಲ್ಲಿ ನಡೆದಾಡುಲೂ ಸಮಸ್ಯೆ ಆಗಿದೆ ಎಂದು ಸ್ಥಳೀಯ ಗ್ರಾಮಸ್ಥರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News