ಹಜ್ ಸಬ್ಸಿಡಿಯಲ್ಲಿ ಬದಲಾವಣೆಗೆ ಮುಸ್ಲಿಮರು ಆಗ್ರಹಿಸುತ್ತಿರುವುದು ಏಕೆ ?
ವಾರ್ಷಿಕ ಹಜ್ ಯಾತ್ರೆಗೆ ನೀಡುತ್ತಿರುವ ಸಬ್ಸಿಡಿಯ ಪರಾಮರ್ಶೆಗೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ನೇಮಕ ಮಾಡಿದೆ. ವಿಮಾನ ಟಿಕೆಟ್ ದರದಷ್ಟು ಸಬ್ಸಿಡಿ ನೀಡುತ್ತಿರುವ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳಿವೆ. ಭಾರತದಿಂದ ಯಾತ್ರೆ ಕೈಗೊಳ್ಳುವ ಪ್ರತಿ ಮುಸ್ಲಿಮರು ಈ ಸಬ್ಸಿಡಿ ಬಳಸಿಕೊಳ್ಳದಿದ್ದರೂ, ಇದು ಮುಸ್ಲಿಮರನ್ನು ಓಲೈಸುವ ಸಲುವಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯ ಎಂದು ವಾದಿಸುವವರಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಸಬ್ಸಿಡಿಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವಂತೆ 2012ರಲ್ಲಿ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಈ ಸಬ್ಸಿಡಿಯನ್ನು 40 ವರ್ಷಗಳ ಹಿಂದೆ ಆರಂಭಿಸಲಾಗಿದೆ. ವಿಮಾನ ಟಿಕೆಟ್ ಖರೀದಿಸುವ ಸಾಮರ್ಥ್ಯ ಇಲ್ಲದ ಯಾತ್ರಿಗಳಿಗಾಗಿ ಇದನ್ನು ಆರಂಭಿಸಲಾಯಿತು. ಯಾತ್ರಾ ವಿಷಯದಲ್ಲಿ ತಜ್ಞರಾಗಿರುವ ಮುಫ್ತಿ ಎ.ರೆಹಮಾನ್ ಮಿಲಿ ಹೇಳುವಂತೆ 1970ರ ದಶಕದವರೆಗೆ ಬಹುತೇಕ ಭಾರತೀಯ ಯಾತ್ರಿಗಳು ಮುಂಬೈನಿಂದ ಜೆದ್ದಾಗೆ ಪ್ರಯಾಣಿಸುತ್ತಿದ್ದರು. "ಕೆಲವಷ್ಟೇ ಯಾತ್ರಿಕರಿಗೆ ವಿಮಾನದಲ್ಲಿ ಹೋಗುವ ಆರ್ಥಿಕ ಚೈತನ್ಯ ಇತ್ತು. ಭಾರತದ ಎಲ್ಲೆಡೆಯ ಹಾಜಿಗಳು ಮುಂಬೈನಲ್ಲಿ ಸೇರುತ್ತಿದ್ದರು. ಮುಂಬೈನ ಮುಸಾಫಿರ್‌ಖಾನಾಗಳು 'ಬಾಬ್-ಇ-ಮಕ್ಕಾ' (ಮೆಕ್ಕಾದ ಹೆಬ್ಬಾಗಿಲು) ಎನಿಸಿಕೊಂಡಿದ್ದವು" ಎಂದು ಮಿಲಿ ನೆನಪಿಸಿಕೊಳ್ಳುತ್ತಾರೆ. ಸಮುದ್ರ ಯಾನ ಮೂಲಕ ಹಜ್ ಯಾತ್ರೆ ಕೈಗೊಳ್ಳುತ್ತಿದ್ದವರಿಗೆ ಪೋರ್ಟ್ ಹಜ್ ಕಮಿಟಿ 1950ರ ದಶಕದವರೆಗೂ ನೆರವಾಗುತ್ತಿತ್ತು.
ಆದರೆ ಹಜ್ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಮೂರು ಹಡಗುಗಳ ಪೈಕಿ ಎರಡರ ಸೇವೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ, ಜನ ವಿಮಾನಯಾನ ಕೈಗೊಳ್ಳುವುದು ಅನಿವಾರ್ಯವಾಯಿತು. 1994ರಲ್ಲಿ ಹಡಗು ಸೇವೆಯನ್ನು ಸ್ಥಗಿತಗೊಳಿಸಿದಾಗ, ಸುಮಾರು ಐದು ಸಾವಿರದಷ್ಟು ಯಾತ್ರಿಕರು ಅಂದರೆ ಒಟ್ಟು ಯಾತ್ರಿಗಳ ಪೈಕಿ ಐದನೇ ಒಂದರಷ್ಟು ಮಂದಿ ಹಡಗು ಪಡೆದರು.
ವಿಮಾನದರ ದುಬಾರಿಯಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ನೆರವಿಗೆ ಬೇಡಿಕೆ ಹೆಚ್ಚಿತು. ಇದರಿಂದ ಸರ್ಕಾರ ವಿಮಾನ ಟಿಕೆಟ್‌ನ ದರದಷ್ಟು ಸಬ್ಸಿಡಿ ಆರಂಭಿಸಿತು. "ಯಾತ್ರಿಗಳು ಹಡಗಿಗೆ ನೀಡುತ್ತಿರುವಷ್ಟು ದರವನ್ನು ಅವರೇ ಭರಿಸಲಿ. ಅವರ ಟಿಕೆಟ್‌ನ ಉಳಿದ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಇಂದಿರಾಗಾಂಧಿ ಸರ್ಕಾರ ಘೋಷಿಸಿತು" ಎಂದು ಮಿಲಿ ವಿವರಿಸುತ್ತಾರೆ.
ಪ್ರತೀ ಯಾತ್ರಿಕರಿಗೆ ನೀಡುತ್ತಿರುವ ಸಬ್ಸಿಡಿ 20 ಸಾವಿರದಿಂದ 25 ಸಾವಿರ ಎಂದು ಅಂದಾಜು ಮಾಡಲಾಗಿದೆ. ಜೆದ್ದಾಗೆ ಹೋಗಿ ಬರುವ ವಿಮಾನ ಟಿಕೆಟ್ ದರ 42 ರಿಂದ 46 ಸಾವಿರ ರೂಪಾಯಿ. ಇತ್ತೀಚಿನ ವರದಿಗಳ ಪ್ರಕಾರ ಏರ್‌ಲೈನ್ಸ್ ವಾರ್ಷಿಕ ಸುಮಾರು 700 ಕೋಟಿ ರೂಪಾಯಿಗಳನ್ನು ಈ ಸೇವೆಗಾಗಿ ಸರ್ಕಾರದಿಂದ ಪಡೆಯುತ್ತಿದೆ. ಮಿಲಿ ಹೇಳುವಂತೆ ಈ ಸಬ್ಸಿಡಿ ಯಾತ್ರಿಗಳಿಗಿಂತ ಹೆಚ್ಚಾಗಿ ಏರ್‌ಲೈನ್ಸ್‌ಗೆ ನೆರವಾಗುತ್ತಿದೆ.
ಸಬ್ಸಿಡಿ ತೆಗೆಯಬೇಕು ಎನ್ನುವುದು ಕೆಲ ಮುಸ್ಲಿಮರ ಇಚ್ಛೆ. "ಇದನ್ನು ಹಂತಹಂತವಾಗಿ ಸ್ಥಗಿತಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಸರ್ಕಾರ ಇದನ್ನು ಸ್ಥಗಿತಗೊಳಿಸಬಹುದು" ಎಂದು ಹಜ್ ಕಮಿಟಿ ಆಫ್ ಇಂಡಿಯಾ ಸದಸ್ಯ ಸಲೀಮ್ ಅನ್ಸಾರಿ ಹೇಳುತ್ತಾರೆ. "ಸಾಮಾನ್ಯ ಹಜ್‌ಯಾತ್ರಿಗಳಿಗೆ ಸಬ್ಸಿಡಿಯಿಂದ ದೊಡ್ಡ ಪ್ರಯೋಜನವೇನೂ ಆಗುತ್ತಿಲ್ಲ"
2012ರ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್, ಸಬ್ಸಿಡಿಯನ್ನು ಹಂತ ಹಂತವಾಗಿ ನಿಲ್ಲಿಸುವಂತೆ ಸೂಚನೆ ನೀಡುವಾಗ ಎರಡು ಮಂದಿ ನ್ಯಾಯಮೂರ್ತಿಗಳ ಪೀಠ ಕುರ್ ಆನ್ ಹೇಳಿಕೆಯನ್ನು ಉಲ್ಲೇಖಿಸಿ, ಮುಸ್ಲಿಮರು ಹಜ್ ಯಾತ್ರೆಗೆ ತಾವೇ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿತ್ತು. "ಈ ಪವಿತ್ರ ಯಾತ್ರೆಯು ಪ್ರಯಾಣಕ್ಕಾಗಿ ವೆಚ್ಚ ಮಾಡುವಷ್ಟು ಸಂಪತ್ತು ಇದ್ದವರಿಗಷ್ಟೇ ಕಡ್ಡಾಯ" ಎನ್ನುತ್ತಾರೆ ಹಣಕಾಸು ಸಲಹೆಗಾರ ಸೈಯದ್ ಝಾಹಿದ್ ಅಹ್ಮದ್. "ಸಬ್ಸಿಡಿ ಹೋದರೆ, ಯಾತ್ರೆ ಪ್ರತಿಯೊಬ್ಬರಿಗೂ ಸುಲಭವಾಗುತ್ತದೆ"
ಹಲವು ಮಂದಿ ಅಭಿಪ್ರಾಯಪಡುವಂತೆ, ಯಾತ್ರೆಯನ್ನು ಹಲವು ತಿಂಗಳು ಮುನ್ನವೇ ನಿರ್ಧರಿಸುವ ಕಾರಣ ಟಿಕೆಟುಗಳನ್ನು ಮುಂಚಿತವಾಗಿಯೇ ಖರೀದಿಸಿದರೆ, ಸಬ್ಸಿಡಿ ಇಲ್ಲದೇ ಅಗ್ಗದ ವಿಮಾನ ಟಿಕೆಟ್ ಖರೀದಿಸಲು ಅವಕಾಶವಿದೆ.
ಮುಸ್ಲಿಮರು ಹೇಳುವಂತೆ ಸಬ್ಸಿಡಿಯ ಬದಲಾಗಿ, ಸರ್ಕಾರ ಸೌದಿ ಅರೇಬಿಯಾ ಸರ್ಕಾರಕ್ಕೆ, ಭಾರತೀಯರ ಹಜ್ ಕೋಟಾ ಹೆಚ್ಚಿಸುವಂತೆ ಮನವಿ ಮಾಡಬೇಕು. ಯಾತ್ರಿಕರಿಗೆ ಸೌಕರ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಸೌದಿ ಅರೇಬಿಯಾ ಎಲ್ಲ ದೇಶಗಳಿಗೆ ಗರಿಷ್ಠ ಹಜ್ ಯಾತ್ರಿಗಳ ಸಂಖ್ಯೆಯನ್ನು ನಿಗದಿಪಡಿಸಿದೆ. ಆಯಾ ದೇಶದ ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ, ಈ ಕೋಟಾ ನಿಗದಿಪಡಿಸುತ್ತದೆ. ಭಾರತದಿಂದ ಇದೀಗ ಗರಿಷ್ಠ 1.20 ಲಕ್ಷ ಯಾತ್ರಿಗಳನ್ನು ಕಳುಹಿಸಬಹುದು. ಇದು ಹಿಂದೆ ಇದ್ದ ಮಿತಿಗಿಂತ ಶೇಕಡ 20ರಷ್ಟು ಅಧಿಕ. ಮೂರನೇ ಎರಡರಷ್ಟು ಯಾತ್ರಿಗಳು ಹಜ್ ಸಮಿತಿ ಮೂಲಕ ಯಾತ್ರೆ ಕೈಗೊಳ್ಳುತ್ತಾರೆ. ಉಳಿದವರು ತಮ್ಮ ಪ್ರವಾಸ ವ್ಯವಸ್ಥೆಗಳಿಗೆ ಖಾಸಗಿ ಟೂರ್ ಕಂಪನಿಗಳನ್ನು ಅವಲಂಬಿಸುತ್ತಾರೆ. ಹಜ್ ಕಮಿಟಿಯ ಮಾಜಿ ಸದಸ್ಯ ಮೌಲಾನಾ ಮುಸ್ತಕೀಮ್ ಅಜ್ಮಿ ಅವರ ಪ್ರಕಾರ, ಖಾಸಗಿ ಟೂರ್ ಆಪರೇಟರ್‌ಗಳಿಗೆ ಉಪ ಕೋಟಾ ವ್ಯವಸ್ಥೆ ಇರಬಾರದು.
"ಪ್ರವಾಸ ಹಾಗೂ ವಸತಿ ಸೌಲಭ್ಯವನ್ನು ಹಜ್ ಸಮಿತಿ ಮೂಲಕವೇ ಮಾಡುವುದು ಉತ್ತಮ ಹಾಗೂ ಅಗ್ಗ" ಎನ್ನುವುದು ಅವರ ಸಲಹೆ. ಯಾತ್ರೆಗೆ ಕೇವಲ ಏರ್ ಇಂಡಿಯಾವನ್ನೇ ಅವಲಂಬಿಸುವ ಬದಲು, ಯಾತ್ರಿಗಳ ಪ್ರಯಾಣಕ್ಕಾಗಿ ಚಾರ್ಟರ್ಡ್ ವಿಮಾನಗಳನ್ನು ಕಾಯ್ದಿರಿಸುವ ಬಗ್ಗೆ ಹಜ್ ಕಮಿಟಿ ಚಿಂತನೆ ನಡೆಸಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ.