ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ

Update: 2017-01-23 17:35 GMT

ಕಡಬ, ಜ.23: ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ರಬ್ಬರ್ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಮತ್ತು ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರಕಾರ ಮುಂದಾಗಬೇಕು ಎನ್ನುವ ಆಗ್ರಹದೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಾಗೂ ವಿವಿಧ ಕೃಷಿ ರೈತರ ಹಿತರಕ್ಷಣಾ ಹೋರಾಟ ಸಮಿತಿಯ ಆಶ್ರಯದಲ್ಲಿ, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕಡಬ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.  

ಪ್ರತಿಭಟನೆ ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ಮಾತನಾಡಿ, ನೈಜ ರಬ್ಬರ್‌ನ ಬೆಲೆಗಳಲ್ಲಿ ತೀವ್ರ ಕುಸಿತ ಉಂಟಾಗಿರುವುದನ್ನು ತಡೆಯಲು ಕರ್ನಾಟಕ ಸರಕಾರ ಕೇಂದ್ರ ಸರಕಾರದ ಮನವೊಲಿಸಿ ರಬ್ಬರ್‌ಗೆ ಬೆಂಬಲ ಬೆಲೆ ಘೋಷಣೆ ಮಾಡುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡು ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿ 60 ಸಾವಿರ ಹೆಕ್ಟೆರ್‌ಗಳಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ರೈತರು ರಬ್ಬರ್ ಕೃಷಿಯನ್ನು ಅವಲಂಭಿಸಿದ್ದಾರೆ.

ಪುತ್ತೂರು ತಾಲೂಕಿನಲ್ಲಿ ಸುಮಾರು 34 ಸಾವಿರ ಹೆಕ್ಟೆರ್‌ನಲ್ಲಿ ರಬ್ಬರ್ ಕೃಷಿ ಇದೆ. ರಬ್ಬರ್ ಬೆಲೆ ಕುಸಿತದಿಂದಾಗಿ ತಾವು ಮಾಡಿದ ಸಾಲವನ್ನು ಮರು ಪಾವತಿಸಲಾಗದೆ ತತ್ತರಿಸಿ ಹೋಗಿದ್ದು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಬಯಲು ಸೀಮೆಯಲ್ಲಿ ಬೆಳೆಯಲಾಗುವ ಕಬ್ಬು, ಈರುಳ್ಳಿ ಮೊದಲಾದ ಕೃಷಿಗೆ ಬೆಲೆ ಕುಸಿತಗೊಂಡಾಗ ಸರಕಾರ ಮುಂದಾಗಿ ಬೆಂಬಲ ಬೆಲೆ ನೀಡುತ್ತದೆ. ಆದರೆ ಕರಾವಳಿಯ ವಾಣಿಜ್ಯ ಬೆಲೆ ರಬ್ಬರ್ ಬೆಲೆ ಕುಸಿತವಾದಾಗ ರೈತರ ಹಿತ ಕಾಪಾಡಲು ಸರಕಾರ ಮುಂದಾಗಾದಿರುವುದು ವಿಪರ್ಯಾಸ. ಕೇಂದ್ರ ಸರಕಾರ ರಬ್ಬರ್ ಆಮದು ಸುಂಕವನ್ನು ಶೇ.70 ಕ್ಕೆ ಏರಿಸಬೇಕು.

ರಾಜ್ಯ ಸರಕಾರ ರಬ್ಬರ್‌ಗೆ 175 ರೂ. ಬೆಂಬಲ ಬೆಲೆ ಘೋಷಿಸಬೇಕು. ಕೇರಳ ಸರಕಾರ ಮಾದರಿಯಲ್ಲಿ ರಬ್ಬರ್ ಕಿಲೋ ಒಂದರ ಸಹಾಯಧನ ಘೋಷಿಸಬೇಕು. ಕೃಷಿಕರ ಬೆಲೆ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಬೇಕು. ಕಾನೂನು ಸೇವಾ ಪ್ರಾಧಿಕಾರದ ಮೂಲಕ ಬ್ಯಾಂಕ್‌ಗಳು ರೈತರ ಸಾಲ ವಸೂಲಾತಿಗೆ ಕ್ರಮ ಕೈಗೊಂಡಿರುವುದನ್ನು ತಕ್ಷಣ ನಿಲ್ಲಿಸಬೇಕು. ರೈತರು ತಮ್ಮ ಕೃಷಿಯನ್ನು ಉಳಿಸಿಕೊಳ್ಳುವುದಕೋಸ್ಕರ ಕೊಳವೆಬಾವಿಗೆ ಅನುಮತಿ ನೀಡಬೇಕು. ಗ್ರಾ.ಪಂ.ಗಳಲ್ಲಿ ಪಂಪು ಅಳವಡಿಕೆಗೆ ಅನುಮತಿ ನೀಡಲು ಆದೇಶಿಸಬೇಕು.

ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.  ಕೃಷಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ರೈತ ಸಂಘದ ಸದಸ್ಯ ವಿಕ್ಟರ್, ಉರುಂಬಿ ಅಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ಮೊದಲಾದವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಧಾರ್ಮಿಕ ಮುಂದಾಳು ಗೋಪಾಲ್ ರಾವ್ ಕಡಬ ಪ್ರತಿಭಟನೆ ಉದ್ಘಾಟಿಸಿದರು. ಪ್ರತಿಭಟನೆ ಕೊನೆಯಲ್ಲಿ ಕಡಬ ವಿಶೇಷ ತಹಶೀಲ್ದಾರ ಲಿಂಗಯ್ಯ ಅವರಿಗೆ ಬೇಡಿಕೆಗಳ ಆಗ್ರಹದ ಮನವಿಯನ್ನು ನೀಡಲಾಯಿತು.

   ಸಮಿತಿಯ ಕಾರ್ಯದರ್ಶಿ ಶಿವರಾಮ ಕಲ್ಕಳ ಸ್ವಾಗತಿಸಿದರು. ಪ್ರಮುಖರಾದ ಹರೀಶ್ ರೈ ನಡುಮಜಲು, ಎಡಪತ್ಯ ಕೃಷ್ಣಪ್ರಸಾದ್ ಭಟ್, ಬಿ.ಎಂ ಜೋಸೆಫ್ ಪಾದೆ, ಶಶಿಧರ ಎಡಮಂಗಲ, ಆದಂ ಸಾಹೇಬ್, ಸುಂದರ ಗೌಡ ಬಳ್ಳೇರಿ, ಸುಂದರ ನಾಕ್ ಬಿಳಿನೆಲೆ, ಕರೀಂ ನೆಕ್ಕಿತಡ್ಕ, ಸುಂದರ ಕೆ.ಎ, ಸೂರ್ಯನಾರಾಯಣ ಭಟ್ ಪಟ್ರೋಡಿ, ಮಂಜುನಾಥ ಶೆಟ್ಟಿ ಕೋಡಿಂಬಾಳ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News