ದುಬೈ ಬಿಡುತ್ತಿದ್ದೀರಾ? ಈ ಐದು ವಿಷಯಗಳನ್ನು ಮರೆಯದಿರಿ, ನಿರ್ಲಕ್ಷಿಸಬೇಡಿ
ದುಬೈ, ಜ.24: ದುಬೈಯಲ್ಲಿ ವಾಸವಾಗಿದ್ದವರು ಅಲ್ಲಿಂದ ಖಾಯಂ ಆಗಿ ಹೊರ ಹೋಗಲು ನಿರ್ಧರಿಸುವವರು ಹಲವಾರು ಕಾನೂನು ಪ್ರಕ್ರಿಯೆಗಳನ್ನು ಪೂರೈಸಲೇ ಬೇಕಾಗುತ್ತದೆ. ದುಬೈಗೆ ವಲಸೆ ಬರಲು ನಿರ್ಧರಿಸಿದಾಗ ಎಷ್ಟೆಲ್ಲಾ ತಯಾರಿ ನಡೆಸಲಾಗುತ್ತದೆಯೋ ಅಷ್ಟೇ ತಯಾರಿ ಅಲ್ಲಿಂದ ಹೊರ ಬೀಳುವಾಗಲೂ ನಡೆಸಲೇಬೇಕಾಗುತ್ತದೆ. ರಾತ್ರೋರಾತ್ರಿ ದುಬೈ ಬಿಟ್ಟು ತೆರಳುತ್ತೇನೆಂದು ಹೇಳಲು ಸಾಧ್ಯವಿಲ್ಲ.
ದೇಶವನ್ನು ಬಿಟ್ಟು ತೆರಳುವ ಸಂದರ್ಭದಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ಇಲ್ಲಿದೆ ಒಂದು ಮಾಹಿತಿ.
ನಿಮ್ಮ ಉದ್ಯೋಗ ಗುತ್ತಿಗೆ ವಿಚಾರ: ನಿಮ್ಮ ಉದ್ಯೋಗದಾತರಿಗೆ ಪೂರ್ವ ಮಾಹಿತಿಯನ್ನು ನಿಮ್ಮ ಕಾಂಟ್ರಾಕ್ಟ್ ಅವಧಿ ಮುಗಿಯುವ ಮುನ್ನವೇ ನೀಡಿ. ನೀವು ನೊಟೀಸ್ ಅವಧಿಯನ್ನು ಪೂರ್ಣಗೊಳಿಸಬೇಕಾದೀತು ಇಲ್ಲವೇ ಆ ಅವಧಿಗಾಗಿ ಹಣ ಪಾವತಿ ಮಾಡಬೇಕಾದೀತು. ನಿಮ್ಮ ಕಾಂಟ್ರಾಕ್ಟ್ ಅವಧಿ ಮುಕ್ತಾಯ ಹಂತಕ್ಕೆ ಬಂದಿದೆಯೆಂದಾದರೆ ಪಾಸ್ ಪೋರ್ಟನ್ನು ನಿಮ್ಮ ಮಾಲಕರಿಗೆ ಹಸ್ತಾಂತರಿಸಿ ನಿಮ್ಮ ರೆಸಿಡೆನ್ಸ್ ವೀಸಾ ರದ್ದುಗೊಳಿಸಿ. ಇದನ್ನು ಮುಂಚಿತವಾಗಿಯೇ ಮಾಡದೇ ಇದ್ದಲ್ಲಿ ನೀವು ನಗರ ಬಿಡುವುದು ವಿಳಂಬವಾದೀತು ಅಥವಾ ಇಮಿಗ್ರೇಶನ್ ಇಲಾಖೆ ನಿಮ್ಮ ಹೆಸರನ್ನು ಅದರ ಪಟ್ಟಿಯಲ್ಲಿ ತೋರಿಸೀತು. ನಿಮ್ಮ ಅಂತಿಮ ವೇತನದ ವಿಚಾರವನ್ನು ಬಗೆಹರಿಸಿ. ಯಾವುದೇ ತಕರಾರಿದ್ದಲ್ಲಿ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ, ರಾಯಭಾರಿ ಕಚೇರಿಯನ್ನಲ್ಲ. ನಿಮ್ಮ ವೈದ್ಯಕೀಯ ವಿಮೆ ರದ್ದಾಗುವುದು ಹಾಗೂ ಕಾರ್ಡುಗಳನ್ನು ನಿಮ್ಮ ಮಾಲಕರಿಗೆ ಹಸ್ತಾಂತರಿಸಬೇಕು.
ಬ್ಯಾಂಕ್ ಪ್ರಕ್ರಿಯೆಗಳು
ನಿಮ್ಮ ಬ್ಯಾಂಕ್ ಖಾತೆಯನ್ನು ಮುಚ್ಚುವ ಮೊದಲು ನಿಮ್ಮ ಎಲ್ಲಾ ಬಾಕಿ ಬಿಲ್, ಪಾವತಿ, ಇಸಿಎಸ್ ಪಾವತಿ, ಸಾಲ ಹಾಗೂ ಅವಧಿಪೂರ್ವ ಚೆಕ್ಕುಗಳನ್ನು ಕ್ಲಿಯರ್ ಮಾಡಿ. ನಿಮ್ಮ ಖಾತೆಯನ್ನು ನಿಮ್ಮ ಮಾಲಕರು ತೆರೆದಿದ್ದಲ್ಲಿ ನಿಮ್ಮ ಕೊನೆಯ ವೇತನ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆದ ನಂತರ ಸೂಕ್ತ ಪ್ರಕ್ರಿಯೆ ಅನುಸರಿಸುವಂತೆ ಮಾಲಕರಲ್ಲಿ ಹೇಳಿ. ಕೊನೆಯ ತಿಂಗಳಲ್ಲಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಎಲ್ಲಾ ಔಪಚಾರಿಕ ಪ್ರಕ್ರಿಯೆಗಳನ್ನು ಪೂರೈಸಿ. ಯಾವುದೇ ಬಾಕಿಯಿಲ್ಲದೇ ಇದ್ದಲ್ಲಿ ನಿಮ್ಮ ಖಾತೆಯನ್ನು ತಕ್ಷಣ ಮುಚ್ಚಬಹುದು.
ಎಚ್ಚರಿಕೆ: ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಎಲ್ಲಾ ಹಣ ಹಿಂಪಡೆದು ನೀವು ದೇಶ ಬಿಟ್ಟು ತೆರಳಲು ಸಾಧ್ಯವಿಲ್ಲ. ಹಾಗೆ ಮಾಡಿದ್ದೇ ಆದಲ್ಲಿ ನಿಮ್ಮ ಮೇಲೆ ಮಾಸಿಕ ಫೀ ವಿಧಿಸಲಾಗುವುದು ಹಾಗೂ ಮುಂದಿನ ಬಾರಿ ಭೇಟಿ ನೀಡಿದಾಗ ದೊಡ್ಡ ಮೊತ್ತವನ್ನು ನೀವು ಭರಿಸಬೇಕಾಗಬಹುದು.
ನಿಮ್ಮ ಆಸ್ತಿಯ ವಿಚಾರ: ನೀವು ಬಾಡಿಗೆ ಕಟ್ಟಡದಲ್ಲಿ ವಾಸಿಸುವವರಾಗಿದ್ದಲ್ಲಿ ನಿಮ್ಮ ಮಾಲಕರಿಗೆ ನೀವು ಕಟ್ಟಡ ಬಿಡುವ ಬಗ್ಗೆ ನಿಮ್ಮ ಕಾಂಟ್ರಾಕ್ಟ್ ನಂತೆ ನೊಟೀಸ್ ನೀಡಬೇಕಾಗುತ್ತದೆ. ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತರಣೆ ಬೇಕಿದ್ದಲ್ಲಿ ನಿಮ್ಮ ಕಾಂಟ್ರಾಕ್ಟ್ ನವೀಕರಿಸಿ. ನೀವು ಕಾಂಟ್ರಾಕ್ಟ್ ಅಂತ್ಯಗೊಳಿಸಿ ಹೊರ ಹೋಗುವುದಾದರೆ ಕಟ್ಟಡದ ಕೀಲಿಕೈಗಳನ್ನು ಭೂಮಾಲಕರಿಗೆ ಹಸ್ತಾಂತರಿಸಿ ನೀವು ನೀಡಿದ ಠೇವಣಿ ಮೊತ್ತವನ್ನು ಅವರಿಂದ ಸಂಗ್ರಹಿಸಿ.
ದುಬೈಯಲ್ಲಿ ನಿಮಗೆ ನಿಮ್ಮದೇ ಆದ ಆಸ್ತಿಯಿದ್ದ ಪಕ್ಷದಲ್ಲಿ ನೀವು ಅದನ್ನು ಮಾರಾಟ ಇಲ್ಲವೇ ಬಾಡಿಗೆಗೆ ನೀಡಲು ಬಯಸಿದಲ್ಲಿ ಏಜೆಂಟರೊಬ್ಬರ ಮುಖಾಂತರ ಈ ಕಾರ್ಯ ನಿರ್ವಹಿಸಿ. ನೀವು ನಿಮ್ಮ ಏಜೆಂಟರಿಗೆ ಪವರ್ ಆಫ್ ಅಟಾರ್ನಿ ನೀಡಿ ನಿಮ್ಮ ಕಟ್ಟಡಕ್ಕೆ ಬಾಡಿಗೆದಾರರನ್ನು ಹುಡುಕಲು ಹೇಳಿ.
ಎಚ್ಚರಿಕೆ: ನಿಮ್ಮ ಅಪಾರ್ಟ್ ಮೆಂಟನ್ನು ನಿಮ್ಮ ಮನೆಮಾಲಕರಿಗೆ ಹೇಳದೆ ಹಾಗೆಯೇ ನೀವು ಹೊರಟು ಹೋದಲ್ಲಿ ಕೆಲವೊಮ್ಮ ಕಾಂಟ್ರಾಕ್ಟ್ ಸ್ವಯಂ ಆಗಿ ನವೀಕರಣಗೊಳ್ಳುವುದರಿಂದ ಮತ್ತೊಮ್ಮೆ ನೀವು ಹಿಂದಿರುಗಿದಾಗ ದೊಡ್ಡ ಮೊತ್ತವನ್ನೇ ಪಾವತಿಸಬೇಕಾಗಬಹುದು.
ನಿಮ್ಮ ಇತರ ಸೌಕರ್ಯಗಳ ಬಗ್ಗೆ
ದೇಶ ಬಿಟ್ಟು ತೆರಳುವ ಮೊದಲು ನಿಮ್ಮ ಮೊಬೈಲ್ ಫೋನ್ ಆಪರೇಟರ್, ನಿಮ್ಮ ಇಂಟರ್ನೆಟ್ ಹಾಗೂ ಟಿವಿ ಸೇವಾದಾರರೊಂದಿಗಿನ ಗುತ್ತಿಗೆಯನ್ನು ರದ್ದುಪಡಿಸಿ. ಈ ಸೇವೆಗಳನ್ನು ಪಡೆಯುವಾಗ ನೀಡಲಾದ ಠೇವಣಿಯನ್ನು ಹಿಂಪಡೆಯಲು ಮರೆಯಬೇಡಿ. ದಿನ ಪತ್ರಿಕೆ ಹಾಗೂ ಇತರ ಸೇವೆಗಳನ್ನು ಸ್ಥಗಿತಗೊಳಿಸಿ.
ಕೊನೆಯ ಕೆಲ ದಿನಗಳಿರುವಾಗಲೇ ಡಿಇಡಬ್ಲ್ಯುಎ ಇಲಾಖೆಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ಮಾಹಿತಿ ನೀಡಿ ನಿಮ್ಮ ಠೇವಣಿ ಹಿಂದಕ್ಕೆ ಪಡೆಯಿರಿ. ಮೂಲ ಪ್ರತಿಗಳನ್ನು ತೆಗೆದಿರಿಸಿ.
ಎಚ್ಚರಿಕೆ : ನೀವು ನಿಮ್ಮ ವಿದ್ಯುತ್, ನೀರಿನ ಸಂಪರ್ಕಗಳನ್ನು ಕಡಿತಗೊಳಿಸುವ ಬಗ್ಗೆ ಮಾಹಿತಿ ನೀಡದೇ ಇದ್ದಲ್ಲಿ ತಿಂಗಳ ಶುಲ್ಕವನ್ನು ನೀವು ಪಾವತಿಸಲೇ ಬೇಕಾಗುತ್ತದೆ.
ಇತರ ಸಲಹೆಗಳು :
1. ನೀವು ಪೀಠೋಪಕರಣಗಳನ್ನು ಖರೀದಿಸಿದ್ದೇ ಆದಲ್ಲಿ ಹಾಗೂ ಅದನ್ನು ನೀವು ಮಾರಾಟ ಮಾಡಬೇಕೆಂದಿದ್ದಲ್ಲಿ ಆನ್ ಲೈನ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ. ದುಬೈಯಲ್ಲಿ ಇಂತಹ ಪೀಠೋಪಕರಣಗಳನ್ನು ಖರೀದಿಸುವವರು ಹಲವರಿದ್ದಾರೆ.
2. ನೀವು ಕಾರೊಂದನ್ನು ಹೊಂದಿದ್ದರೆ ಅದನ್ನು ಮಾರಾಟ ಮಾಡಿ ಬಿಡಿ. ಮಾರಾಟ ಮಾಡಲು ಅಸಾಧ್ಯವಾಗಿದ್ದರೆ ಏಜೆಂಟರೊಬ್ಬರಿಗೆ ಅಥವಾ ನಿಮ್ಮ ಸಂಬಂಧಿಕರೊಬ್ಬರಿಗೆ ಪವರ್ ಆಫ್ ಅಟಾರ್ನಿ ನೀಡಿ.
3. ನಿಮ್ಮ ಲಗೇಜ್ ಬಹಳಷ್ಟಿದ್ದರೆ ಏರ್ ಲೈನ್ ಸಂಸ್ಥೆಯನ್ನು ಸಂಪರ್ಕಿಸಿ ನಿಮ್ಮ ಲಗೇಜಿನ ವೆಚ್ಚ ಎಷ್ಟಾಗಬಹುದೆಂದು ಮುಂಚಿತವಾಗಿ ವಿಚಾರಿಸಿ.
4. ನಿಮ್ಮ ಎಲ್ಲಾ ಮೂಲಪ್ರತಿಗಳನ್ನು ಜೋಪಾನವಾಗಿಡಿ ಅಥವಾ ಅವುಗಳನ್ನು ಕ್ಲೌಡ್ ಸ್ಟೋರೇಜ್ ನಲ್ಲಿ ಅಪ್ ಲೋಡ್ ಮಾಡಿ.