×
Ad

​ಆವರಣ ಗೋಡೆಯ ನಿರೀಕ್ಷೆಯಲ್ಲಿ ದ.ಕ. ಜಿಲ್ಲಾಧಿಕಾರಿಯ ಕಚೇರಿ!

Update: 2017-01-24 15:24 IST

ಮಂಗಳೂರು, ಜ.24: ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣ ಗೋಡೆಯ ನಿರೀಕ್ಷೆಯಲ್ಲಿದೆ. ಕಚೇರಿಯ ಎಡಭಾಗದ ಒಂದು ಕಡೆ ಆವರಣ ಗೋಡೆ ನಿರ್ಮಿಸಲಾಗಿದೆ. ಕಚೇರಿಯ ಮುಂಭಾಗದಲ್ಲೂ ಕಬ್ಬಿಣದ ಗೇಟ್ ಅಳವಡಿಸಲಾಗಿದೆ. ಬಲಭಾಗದಲ್ಲಿ ಕಲ್ಲುಕಟ್ಟಿ ಸುಭದ್ರಗೊಳಿಸಲಾಗಿದೆ. ಆದರೆ, ಎಡಭಾಗದಲ್ಲಿ ಪೂರ್ಣಪ್ರಮಾಣದ ಆವರಣಗೋಡೆಯಿಲ್ಲ. ಅಲ್ಲಲ್ಲಿ ಚದುರಿದಂತೆ ಆವರಣ ಗೋಡೆ ಕಟ್ಟಲಾಗಿದೆ. ಅದೂ ಕೂಡ ಬೀಳುವ ಸ್ಥಿತಿಯಲ್ಲಿ ಇದೆ. ಕಚೇರಿಯ ಎಡಭಾಗದಲ್ಲಿ ಅಂದರೆ ಬಂದರ್ ದಕ್ಕೆಗೆ ಹೋಗುವ ರಸ್ತೆಯ ಪಕ್ಕ ಮತ್ತು ಡಿಸಿ ಕಚೇರಿಯ ಹಿಂಬದಿಯ ಸ್ಥಿತಿ ಚಿಂತಾಜನಕವಾಗಿದೆ.

ಎಡಭಾಗದಲ್ಲಿ ರಸ್ತೆ ಮತ್ತು ಡಿಸಿ ಕಚೇರಿಯ ಜಾಗದ ಮಧ್ಯೆ ಆಳೆತ್ತರದ ಅಂತರವಿದೆ. ನಾದುರಸ್ಥಿಯಲ್ಲಿರುವ ಆವರಣ ಗೋಡೆಗೆ ತಾಗಿಕೊಂಡಿರುವ ಭಾರೀ ಗಾತ್ರದ ಮರಗಳು ಅಪಾಯದ ಅಂಚಿನಲ್ಲಿವೆ. ಮಳೆಗಾಲದಲ್ಲಂತೂ ಅಪಾಯ ಕಟ್ಟಿಟ್ಟ ಬುತ್ತಿ.

ಇಲ್ಲಿನ ಕಾಲು ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಕೂಲಿ ಕಾರ್ಮಿಕರು ಬಂದರ್, ಕಂದುಕ, ದಕ್ಕೆ, ಬೆಂಗರೆ ಪ್ರದೇಶಕ್ಕೆ ತೆರಳುತ್ತಿದ್ದಾರೆ. ಯಾವ ಕ್ಷಣದಲ್ಲಿ ಮರ ಉರುಳಬಹುದು, ನಾಯಿಯ ಆಕ್ರಮಣಕ್ಕೆ ತುತ್ತಾಗಬಹುದು ಎಂದು ಹೇಳಲಿಕ್ಕೆ ಆಗದು. ಯಾಕೆಂದರೆ ಇಲ್ಲಿ ರಾತ್ರಿ ಹಗಲೆನ್ನದೆ ನಾಯಿಗಳ ಕಾಟವೂ ವಿಪರೀತವಿದೆ. ಈ ಕಾಲು ರಸ್ತೆಯಲ್ಲೇ ನಾಯಿಗಳು ಅಲೆದಾಡಿಕೊಂಡಿರುತ್ತದೆ. ಕುಡುಕರೂ ಬಿದ್ದಿರುತ್ತಾರೆ. ಇದರಿಂದ ಈ ರಸ್ತೆಯಲ್ಲಿ ನಡೆದಾಡುವುದೇ ಅಪಾಯಕಾರಿ ಎಂದು ಸ್ಥಳೀಯರಾದ ಮುಹಮ್ಮದ್ ಮುಸ್ತಫಾ ಹೇಳುತ್ತಾರೆ.

ಈ ಕಾಲುದಾರಿಗೆ ಅಳವಡಿಸಲಾದ ಕಲ್ಲು ಚಪ್ಪಡಿ ಕೂಡ ಅಪಾಯವನ್ನು ತಂದೊಡ್ಡುತ್ತವೆ. ಕೆಲವು ಕಲ್ಲು ಚಪ್ಪಡಿಗಳು ಕಿತ್ತು ಹೊರಬಂದಂತಿದ್ದು, ಆಯತಪ್ಪಿ ಬಿದ್ದರೆ ಅಪಾಯ ತಪ್ಪಿದ್ದಲ್ಲ. ಡಿಸಿ ಕಚೇರಿಯ ಎಡ ಮತ್ತು ಹಿಂಬದಿಯಲ್ಲೂ ಪೊದೆಗಳು ಕಾಣಿಸಿಕೊಂಡಿವೆ. ರೆಡ್‌ಕ್ರಾಸ್ ಕಟ್ಟಡ ಪಾಳುಬಿದ್ದಿದ್ದು, ಇಲ್ಲೂ ಎಗ್ಗಿಲ್ಲದೆ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಹಾಗಾಗಿ ಆಸುಪಾಸಿನವರು ತ್ಯಾಜ್ಯವಸ್ತುವನ್ನು ಇಲ್ಲೇ ರಾಶಿ ಹಾಕುತ್ತಾರೆ. ಇದರಿಂದ ಪರಿಸರ ದುರ್ವಾಸನೆಯಿಂದ ಕೂಡಿದೆ.

ಡಿಸಿ ಕಚೇರಿಯ ಆವರಣಕ್ಕೆ ಯಾವುದೇ ಭದ್ರತೆಯಿಲ್ಲದ ಕಾರಣ ಯಾರು ಯಾವ ಕ್ಷಣ ಒಳಹೋಗಬಹುದು. ಹಾಗಾಗಿ ಇಲ್ಲಿ ರಾತ್ರಿಯಾಗುತ್ತಲೇ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಇಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕ ಜೆ.ಆರ್.ಲೋಬೊ ಸಹಿತ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದೇನೆ. ಪ್ರವಾಸೋದ್ಯಮ,ಮೀನುಗಾರಿಕೆ ಹೀಗೆ ಬೇರೆ ಬೇರೆ ಇಲಾಖೆಯ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಲು ಶಾಸಕರು ಪ್ರಯತ್ನ ನಡೆಸಿದ್ದಾರೆ.ಶೀಘ್ರ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಶಾಸಕರ ಸಹಿತ ಹಿರಿಯ ಅಧಿಕಾರಿಗಳ ಗಮನವನ್ನು ಮತ್ತೊಮ್ಮೆ ಸೆಳೆಯುತ್ತೇನೆ.
-ಅಬ್ದುಲ್ ಲತೀಫ್ ಕಂದುಕ,  ಮನಪಾ ಕಾರ್ಪೊರೇಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News