ಜ.27: ‘ಮಾಧ್ಯಮಗಳು ಮತ್ತು ಸಾಮಾಜಿಕ ಜವಾಬ್ದಾರಿ’ ಉಪನ್ಯಾಸ
ಮಂಗಳೂರು, ಜ.24: ರೇಡಿಯೊ ಕೇಳುಗರ ಸಂಘದ 32ನೆ ಕಾರ್ಯಕ್ರಮದ ಅಂಗವಾಗಿ ‘ಮಾಧ್ಯಮಗಳು ಮತ್ತು ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯದಲ್ಲಿ ಜ.27ರಂದು ಸಂಜೆ 6ಗಂಟೆಗೆ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸವನ್ನು ಆಯೋಜಿಸಲಾಗಿದೆ ಎಂದು ರೇಡಿಯೊ ಕೇಳುಗರ ಸಂಘದ ಕಾರ್ಯದರ್ಶಿ ಸಾವಿತ್ರಿ ರಾಮರಾವ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಧ್ಯಮಗಳು ಮತ್ತು ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯದ ಕುರಿತು ಆಕಾಶವಾಣಿ ಕಾರ್ಯಕ್ರಮ ನಿವೃತ್ತ ಮುಖ್ಯಸ್ಥ ಡಾ. ವಸಂತಕುಮಾರ್ ಪೆರ್ಲ ಉಪನ್ಯಾಸ ನೀಡಲಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವಸಂತಕುಮಾರ್ ಪೆರ್ಲ ಆಕಾಶವಾಣಿ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನೂ ಏರ್ಪಡಿಸಿದೆ ಎಂದು ಹೇಳಿದರು.
ಪುರಂದರ ದಾಸರ ಆರಾಧನೆಯ ಪ್ರಯುಕ್ತ ಅಂದು ಸಂಜೆ 5:30ಕ್ಕೆ ಕಲಾ ನಿಕೇತನ ಸಂಗೀತ ಶಾಲೆಯ ವಿದ್ಯಾರ್ಥಿಗಳು ದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಲಿದ್ದು, ಮುಕ್ತ ಪ್ರವೇಶವಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೇಡಿಯೊ ಕೇಳುಗರ ಸಂಘದ ಅಧ್ಯಕ್ಷ ಯು. ರಾಮರಾವ್, ಉಪಾಧ್ಯಕ್ಷ ಕೆ.ವಿ. ಸೀತಾರಾಮ್, ಕೋಶಾಧಿಕಾರಿ ಪಿ.ರವಿಂದ್ರ ರಾವ್ ಉಪಸ್ಥಿತರಿದ್ದರು.