×
Ad

ಜ.27ರಂದು ಕಂಬಳದ ಪರ ಮಂಗಳೂರಿನಲ್ಲಿ ಮಾನವ ಸರಪಳಿ

Update: 2017-01-24 18:49 IST

ಮಂಗಳೂರು, ಜ. 24: ಕಂಬಳಕ್ಕೆ ಎದುರಾಗಿರುವ ಎಲ್ಲ ರೀತಿಯ ಕಾನೂನು ತೊಡಕುಗಳನ್ನು ನಿವಾರಿಸಲು ಜ.25ರಂದು ಮಂಗಳೂರಿಗೆ ಆಗಮಿಸುವ ಕೇಂದ್ರ ಕಾನೂನು ಸಚಿವರಿಗೆ ಮನವಿ ಸಲ್ಲಿಸುವುದು, ಜ.28ರಂದು ಮೂಡುಬಿದಿರೆಯಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲ ಮತ್ತು ಇದಕ್ಕೆ ಪೂರ್ವಭಾವಿಯಾಗಿ ದ.ಕ. ಜಿಲ್ಲಾ ಕಂಬಳ ಸಮಿತಿ ವತಿಯಿಂದ ಜ.27ರಂದು ನಗರದ ಹಂಪನಕಟ್ಟೆಯಲ್ಲಿ ಬೃಹತ್ ಮಾನವ ಸರಪಳಿ ಹಾಗು ಜ.30ರ ತಡೆಯಾಜ್ಞೆಯ ವಿಚಾರಣೆಯಲ್ಲಿ ಕಂಬಳಕ್ಕೆ ಅವಕಾಶ ಸಿಗದಿದ್ದರೆ ಫೆ.5ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಕಂಬಳಾಭಿಮಾನಿಗಳ ಸಭೆ ನಿರ್ಣಯ ಕೈಗೊಂಡಿತು.

ನಗರ ಹೊರವಲಯದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂಬಳಾಭಿಮಾನಿಗಳ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ, ಜ.25ರಂದು ಮಂಗಳೂರಿಗೆ ಆಗಮಿಸುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್‌ರನ್ನು ಭೇಟಿ ಮಾಡಿ ಕಂಬಳಕ್ಕೆ ಎದುರಾಗಿರುವ ಕಾನೂನು ತೊಡಕುಗಳನ್ನು ನಿವಾರಿಸುವಂತೆ ಜಿಲ್ಲಾ ಕಂಬಳ ಸಮಿತಿಯ ಮೂಲಕ ಮನವಿ ಮಾಡಲಾಗುವುದು ಎಂದರು.

ಕಂಬಳ ಇತಿಹಾಸ ಪ್ರಸಿದ್ಧ ತುಳುನಾಡಿನ ಜಾನಪದ ಕ್ರೀಡೆಯಾಗಿದೆ. ಜಿಲ್ಲೆಯ 2 ಕಂಬಳಕ್ಕೆ ಸರಕಾರವೇ ಅನುದಾನ ನೀಡುತ್ತಿದೆ. ಆದರೆ ಇದೀಗ ಕಂಬಳಕ್ಕೆ ಕಾನೂನು ತೊಡಕು ಎದುರಾಗಿದೆ. ಇದನ್ನು ನಿವಾರಿಸಲು ಜಿಲ್ಲೆಯ ಜನರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಶಾಸಕ ಅಭಯಚಂದ್ರ ಜೈನ್ ರಾಜ್ಯ ಸರಕಾರದಿಂದ ಬೆಂಬಲ ದೊರಕಿಸುವ ಪ್ರಯತ್ನ ಮಾಡಿದರೆ,  ಸಂಸದನಾಗಿ ನಾನು ಕೇಂದ್ರದ ಸಹಕಾರಕ್ಕೆ ಯತ್ನಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಜ.30ರ ವಿಚಾರಣೆಯ ವೇಳೆ ತಡೆಯಾಜ್ಞೆ ನಿವಾರಣೆಯಾಗುವ ವಿಶ್ವಾಸವಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅಧಿವೇಶನಗಳ ಹಿನ್ನೆಲೆಯಲ್ಲಿ ಫೆ. 5ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಕಂಬಳದ ಪರವಾಗಿ ವಾದಿಸುತ್ತಿರುವ ನ್ಯಾಯವಾದಿ ಪವನ್‌ಕುಮಾರ್ ಮಾತನಾಡಿ, ಕಂಬಳಕ್ಕೆ ಜಲ್ಲಿಕಟ್ಟು ಕ್ರೀಡೆಯಿಂದಲೇ ಮೊದಲ ಹೊಡೆತ ಬಿದ್ದಿದೆ. 2016ರ ಜ.7ರ ಕೇಂದ್ರದ ನೋಟಿಫಿಕೇಶನ್‌ನಲ್ಲಿ ಪಟ್ಟಿಯಿಂದ ಕೋಣವನ್ನು ಹೊರಗಿಟ್ಟರೂ, ಪೇಟಾದವರು ಕೋಣವೂ ನಿರ್ಬಂಧಿತ ಪಟ್ಟಿಯಲ್ಲಿದೆ ಎಂದು ವಾದಿಸುತ್ತಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಕಂಬಳಕ್ಕೆ ಜಯ ಲಭಿಸುವ ಪೂರ್ಣ ವಿಶ್ವಾಸವಿದೆ ಎಂದರು.

 ಬಾಳೆಕೋಡಿ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ, ಬಾರಾಡಿಬೀಡು ಡಾ. ಜೀವಂಧರ್ ಬಳ್ಳಾಲ್ ಹೋರಾಟದ ಅನಿವಾರ್ಯತೆಯನ್ನು ವಿವರಿಸಿದರು.

ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ನಟ ನವೀನ್ ಡಿ.ಪಡೀಲ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ ಕಲ್ಕೂರ ಮತ್ತಿತರರಿದ್ದರು.

ಉಪ್ಪಿನಂಗಡಿ ಕಂಬಳ ಸಮಿತಿಯ ಅಧ್ಯಕ್ಷ ಕೆ.ಎಸ್.ಅಶೋಕ್‌ಕುಮಾರ್ ರೈ ಸ್ವಾಗತಿಸಿದರು. ವಿಜಯಕುಮಾರ್ ಶೆಟ್ಟಿ ಕಂಗಿನಮನೆ ವಂದಿಸಿದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜಾ ನಿರ್ವಹಿಸಿದರು.

 ಹೋರಾಟಕ್ಕೆ ತಂಡ ರಚನೆ

ಮುಂದಿನ ಹೋರಾಟಕ್ಕೆ ವಿವಿಧ ಕ್ಷೇತ್ರಗಳಲ್ಲಿ ಬೆಂಬಲ ದೊರಕಿಸುವ ನಿಟ್ಟಿನಲ್ಲಿ ತಂಡವೊಂದನ್ನು ರಚಿಸಲಾಯಿತು. ಜನಪ್ರತಿನಿಧಿಗಳ ಸಂಪರ್ಕಕ್ಕೆ ನಳಿನ್ ಕುಮಾರ್ ಕಟೀಲ್, ಕಂಬಳ ಸಮಿತಿಗಳ ಸಂಪರ್ಕಕ್ಕೆ ಬಾರ್ಕೂರು ಶಾಂತರಾಮ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಹೊರರಾಜ್ಯ, ಜಿಲ್ಲೆಯ ಸಂಪರ್ಕಕ್ಕೆ ನಾಗರಾಜ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ, ಚಿತ್ರನಟರು- ಕಲಾವಿದರ ಸಂಪಕಕ್ಕೆ ವಿಜಯಕುಮಾರ್ ಕೊಡಿಯಾಲ್‌ಬೈಲ್, ನವೀನ್ ಡಿ.ಪಡೀಲ್, ಸುಂದರ ರೈ ಮಂದಾರ, ವಿದ್ಯಾರ್ಥಿ ಸಂಘಟನೆಯ ಸಂಪರ್ಕಕ್ಕೆ ಹರೀಶ್ ಪೂಂಜಾ, ಕ್ಯಾ. ಬ್ರಿಜೇಶ್ ಚೌಟ, ರವಿಚಂದ್ರ, ರಂಜನ್ ಗೌಡ, ಯುವ ಸಂಘಟನೆಯ ಸಂಪರ್ಕಕ್ಕೆ ಸತ್ಯಜಿತ್ ಸುರತ್ಕಲ್, ಜಗದೀಶ್ ಶೇಣವ, ಶರಣ್ ಪಂಪ್‌ವೆಲ್, ಸ್ವಾಮೀಜಿಗಳ ಸಂಪರ್ಕಕ್ಕೆ ಬಾಳೆಕೋಡಿ ಶ್ರೀ, ಉದ್ಯಮಿಗಳ ಸಂಪರ್ಕಕ್ಕೆ ಪುಷ್ಪರಾಜ್ ಜೈನ್, ಗಿರಿಧರ್ ಶೆಟ್ಟಿ, ಬಸ್ ಮಾಲಕರ ಸಂಪರ್ಕಕ್ಕೆ ರಾಜವರ್ಮ ಬಲ್ಲಾಳ್, ಯಕ್ಷಗಾನದ ಸಂಪರ್ಕಕ್ಕೆ ಕದ್ರಿ ನವನೀತ್ ಶೆಟ್ಟಿ, ವಕೀಲರ ಸಂಪಕಕ್ಕೆ ಮೋನಪ್ಪ ಭಂಡಾರಿ, ವಿವೇಕ್ ಶೆಟ್ಟಿ, ಚರ್ಚ್, ಮಸೀದಿ ಧರ್ಮಗುರುಗಳ ಸಂಪರ್ಕಕ್ಕೆ ಎಂ.ಜಿ. ಹೆಗ್ಡೆ ಅವರನ್ನು ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News