×
Ad

ಕಂಬಳದ ಪರ ಹೋರಾಟಕ್ಕೆ ಬೆಂಬಲ : ರಂಜನ್ ಜಿ ಗೌಡ

Update: 2017-01-24 19:29 IST

ಬೆಳ್ತಂಗಡಿ , ಜ.24  : ಕೃಷಿ ಪರಂಪರೆ, ರೈತ ಪ್ರೀತಿಯ ಕೃಷಿಗಾಗಿ ಸಾಕುತ್ತಿರುವ ಕೋಣಗಳನ್ನು ಉತ್ತಮವಾಗಿ ಪಳಗಿಸಿ ಕಂಬಳಕ್ಕೆ ಬಲಸಲಾಗುತ್ತಿದ್ದು ಇದನ್ನು ನಿಲ್ಲಿಸಲು ಕೃಷಿ ಪರಂಪರೆ ತಿಳಿಯದ ಎನ್‌ಜಿಒಗಳು ಕಾನೂನಿನ ಮೊರೆ ಹೋಗಿದ್ದು ಇದರಿಂದ ಕಂಬಳಕ್ಕೆ ಅಡೆತಡೆಗಳುಂಟಾಗುತ್ತಿದೆ. ಯಾವುದೇ ಕಾರಣಕ್ಕೂ ಕಂಬಳ ನಿಲ್ಲಬಾರದು ಇದಕ್ಕಾಗಿ ಪಕ್ಷ ಬೇಧ ಮರೆತು ಹೋರಾಟ ನಡೆಸಲಾಗುವುದು ಎಂದು ಬಂಗಾಡಿ-ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ ಹೇಳಿದ್ದಾರೆ.

ಅವರು ಮಂಗಳವಾರ ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿ , ಅನಾದಿಕಾಲದಿಂದ ಬಂದ ಗ್ರಾಮೀಣ ಕ್ರೀಡೆ ಇದಾಗಿದ್ದು  , ಈ ಕಂಬಳಗಳಿಗೆ ಡಾ ಹೆಗ್ಗಡೆ, ಅಳದಂಗಡಿ ಅರಸರು ಸೇರಿದಂತೆ ಅನೇಕ ಮಹಾನೀಯರು ಬೆಂಬಲ ಸೂಚಿಸಿದ್ದು ಅದರಂತೆ ಅವರ ಮಾರ್ಗದರ್ಶನ ಪಡೆದು ಕಂಬಳ ಉಳಿಸಲು ಹೋರಾಟ ನಡೆಸಲಾಗುವುದು. ಜ. 27ರಂದು ಮಂಗಳೂರಿನಲ್ಲಿ ಮಾನವ ಸರಪಳಿ ಮಾಡುವ ಮೂಲಕ ಮತ್ತು 28ರಂದು ಮೂಡಬಿದ್ರೆಯಲ್ಲಿ ಕೋಣಗಳೊಂದಿಗೆ ಮತ್ತು ಓಡಿಸುವವರೊಂದಿಗೆ ಕಂಬಳ ಪ್ರೇಮಿಗಳು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದು  , ನಂತರ ಜ. 30ರ ಕೋರ್ಟ್ ಆದೇಶ ನೋಡಿ ಪ್ರತಿಭಟನೆಯ ರೂಪುೇಷೆ ಮಾಡಲಾಗುವುದು ಎಂದರು.

ಅಮಾನುಷ ರೀತಿಯಲ್ಲಿ ಎತ್ತುಗಳ ಸ್ಪರ್ಧೆ, ಕುದುರೆ ಸ್ಪರ್ಧೆ ಬಗ್ಗೆ ಯಾವುದೇ ಅಕ್ಷೇಪಣೆ ಮಾಡದೆ ಕೇವಲ ಮನೆಯ ಸಂಸಾರದಂತೆ ಬೆಳೆಸಿ ಕಂಬಳಕ್ಕೆ ಬಳಸುವ ಕೋಣಗಳ ಬಗ್ಗೆ ಈ ಎನ್‌ಜಿಒಗಳಿಗೆ ಅನುಕಂಪ ಬಂದಿರುವುದು ಸಂಶಯ ಉಂಟುಮಾಡಿದೆ. ಇಂತಹ ಎನ್‌ಜಿಒಗಳಿಗೆ ಕಂಬಳ ಬಗ್ಗೆ ಯಾವ ಮಾಹಿತಿಯಿದೆ ಎಂಬುದನ್ನು ತಿಳಿಯಬೇಕಾಗಿದೆ ಎಂದರು.

ಜ. 28ರಂದು ಮೂಡಬಿದಿರೆಯಲ್ಲಿ ನಡೆಯುವ ಪ್ರತಿಭಟನೆಗೆ ತಾಲೂಕಿನಿಂದ 25 ಕೋಣಗಳ ಜೊತೆ ಕಂಬಳ ಓಟಗಾರರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.

ಕೊಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ.ಎಂ.ಎಂ.ದಯಾಕರ್ ಮಾತನಾಡಿ ಧಾರ್ಮಿಕ, ಸಾಂಸ್ಕೃತಿಕ ಸಮಗ್ರ ತುಳುನಾಡಿನ ಕ್ರೀಡೆ ಕಂಬಳವಾಗಿದ್ದು ಇದು ನಾಶವಾಗುವ ಅಪಾಯ ಕಂಡುಬರುತ್ತಿದೆ. ಇದರ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಜೊತೆಗೆ ಜನಾಂದೋಲನ ಅಗತ್ಯವಿದೆ. ಇದೀಗ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಜನರ ಹೋರಾಟಕ್ಕೆ ಬೆಂಬಲ ಸಿಕ್ಕಿದ್ದು ಇದು ಕಂಬಳ ಹೋರಾಟಗಾರರಿಗೆ ಶಕ್ತಿ ಬಂದಂತಾಗಿದೆ. ಯಾವುದೇ ಕಾರಣಕ್ಕೂ ಇತಿಹಾಸವಿರುವ ಕಂಬಳ ನಿಲ್ಲಬಾರದು. ರಾಷ್ಟ್ರವಿರೋಧಿ, ಜೀವ ವಿರೋಧಿ, ಸಂಸ್ಕೃತಿ ವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕೇ ವಿನಃ ಇಂತಹ ಗ್ರಾಮಿಣ ಕ್ರೀಡೆಗಳನ್ನು ನಿಷೇಧ ಬೇಡ ಎಂದರು.

ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾತನಾಡಿ , ದ.ಕ. ಉಡುಪಿ ಕರಾವಳಿ ಜಿಲ್ಲೆಯ ಜನರು ರಾಜ್ಯಕ್ಕೆ ಅನ್ಯಾಯವಾದಾಗ ಪ್ರತಿಭಟನೆಗೆ ಮುಂದಾಗುತ್ತಿದ್ದೆವು. ಆದರೆ ನೇತ್ರಾವತಿ ವಿಚಾರದಲ್ಲಿ ರಾಜ್ಯ ನಮ್ಮೊಂದಿಗೆ ಇಲ್ಲದಿದ್ದರೂ ಇದೀಗ ಕಂಬಳಕ್ಕೆ ಇಡೀ ರಾಜ್ಯದ ಜನತೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಕಂಬಳವನ್ನು ನಾಶ ಮಾಡುವ ಎಲ್ಲಾ ಪ್ರಯತ್ನಗಳು ವಿಫಲಗೊಳ್ಳಲಿದೆ. ಕಂಬಳದೊಂದಿಗೆ ನೇತ್ರಾವತಿ, ಎತ್ತಿನಹೊಳೆ ಯೋಜನೆಯ ವಿರೋಧಿ ಹೋರಾಟವು ಬಲಗೊಳ್ಳಬೇಕಾಗಿದೆ ಎಂದರು.

ಗೋಷ್ಠಿಯಲ್ಲಿ ಬಳ್ಳಮಂಜ ಕಂಬಳ ಸಮಿತಿಯ ಅಧ್ಯಕ್ಷ ಸುಬ್ಬಯ್ಯ ಶೆಟ್ಟಿ, ವೇಣೂರು ಕಂಬಳ ಸಮಿತಿಯ ವಲೇರಿಯನ್ ಲೊಬೋ, ಬಂಗಾಡಿ ಕೊಲ್ಲಿ ಸಮಿತಿಯ ಕಾಸಿಂ ಬಂಗಾಡಿ, ಭರತ್ ಕುಮಾರ್, ತುಂಗಪ್ಪ ಪೂಜಾರಿ, ತುಳುನಾಡು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಶೈಲೇಶ್ ಆರ್ ಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News