×
Ad

ಮಂಗಳೂರು ವಿವಿಯಲ್ಲಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ

Update: 2017-01-24 19:37 IST

ಕೊಣಾಜೆ , ಜ.24 : ವಿವೇಕಾನಂದರಿಗೆ ಸಂಸ್ಕೃತ, ಬಂಗಾಳಿ, ಆಂಗ್ಲ, ಸ್ಪಾನಿಷ್, ಫ್ರೆಂಚ್, ಹಿಂದಿ ಸೇರಿದಂತೆ ಪ್ರತಿಭಾಷೆಯಲ್ಲೂ ವಿಶೇಷ ಪಾಂಡಿತ್ಯವಿತ್ತು. ಮಾತ್ರವಲ್ಲದೆ ನಮ್ಮ ನೆಲದ ಸಂಸ್ಕೃತಿಯನ್ನು ವಿಶ್ವವ್ಯಾಪಿಯಾಗಿ ಪಸರಿಸಿದ ಸಂತರಾಗಿದ್ದಾರೆ ಎಂದು ಮಂಗಳೂರು ವಿವಿಯ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸುರೇಂದ್ರ ರಾವ್ ಅವರು ಅಭಿಪ್ರಾಯಪಟ್ಟರು.

 ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಆಶ್ರಯದಲ್ಲಿ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದ 154ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
      
 ಭಾರತೀಯ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಪ್ರತಿಯೊಬ್ಬ ಹೆಮ್ಮೆ ಪಡುವ ಅತಿ ಶ್ರೇಷ್ಠ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದ್ದು. ಸನ್ಯಾಸಿಗಳ ಉಡುಗೆ ತೊಡುಗೆಗೂ ಅವರ ನಡತೆಗೂ ಬಹಳಷ್ಟು ವ್ಯತ್ಯಾಸವಿದ್ದ ಕಾಲದಲ್ಲಿ ಭಾರತೀಯ ಸಂತರು, ಸಂತರ ನಡೆ ನುಡಿ ಹೇಗಿದೆ ಎಂಬುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟವರು ವಿವೇಕಾನಂದರು. ವಿವೇಕಾನಂದ ಎಂಬುದು ಯಾವುದೋ ಕಾಲದಲ್ಲಿ ಯಾವುದೋ ಒಂದು ಯುಗದಲ್ಲಿ ಹುಟ್ಟಿದವರು. ಅಂತಹ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ಕೆಲವುಸಂಸ್ಥೆಗಳು ಕಾರ್ಯನಿರ್ವಹಿಸಿದ ಕಾರಣಕ್ಕೆ ಅವರ ಮರುಸೃಷ್ಟಿ ಸಾಧ್ಯವಿಲ್ಲ. ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವಕರು ಮುನ್ನಡೆಯಬೇಕು ಎಂದು ಹೇಳಿದರು.

ಪ್ರಪಂಚ ಸುತ್ತುತ್ತಿದ್ದಾಗ ವಿವೇಕಾನಂದರ ಆಕರ್ಷಕ ವ್ಯಕ್ತಿತ್ವ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ವರ್ಣ, ಭಾಷೆ, ದೇಶದ ಹಂಗಿಲ್ಲದೆ ಜನರು ಅವರನ್ನು ನೋಡಲು ಮುಗಿಬೀಳುತ್ತಿದ್ದರು. ಹಿಂದು ಧರ್ಮದ ಸಾರಗಳನ್ನು ಪ್ರಪಂಚದ ಜನತೆಗೆ ಉಣಬಡಿಸಿದರು ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಸಿದ್ದಾಂತ, ಸಂಸ್ಕೃತಿಯನ್ನು ವಿದೇಶಕ್ಕೆ ಪರಿಚಯಿಸಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಮಹಾನುಭವ ವ್ಯಕ್ತಿ ವಿವೇಕಾನಂದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ತಿರುಪತಿಯಲ್ಲಿ ಸಿ.ವಿ.ರಾಮನ್ ಜನ್ಮಶತಮಾನೋತ್ಸವ ಪ್ರಶಸ್ತಿ ಪಡೆದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಬೈರಪ್ಪ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ. ಲೋಕೇಶ್ ಉಪಸ್ಥಿತರಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಸನ್ಮಾನ ಪತ್ರ ವಾಚಿಸಿದರು.

 ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಉದಯ ಬಾರ್ಕೂರು ಸ್ವಾಗತಿಸಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News