×
Ad

ಸುಷ್ಮಾ ಎಫೆಕ್ಟ್:ವೃದ್ಧ ದಂಪತಿಯ ಅಂಗವಿಕಲ ಹೆಣ್ಣುಮಕ್ಕಳ ಮನೆಗೇ ಬಂದ ಪಾಸ್‌ಪೋರ್ಟ್ ಅಧಿಕಾರಿಗಳು

Update: 2017-01-24 22:30 IST

ಹೊಸದಿಲ್ಲಿ,ಜ.24: ತಮ್ಮ ಅಂಗವಿಕಲ ಪುತ್ರಿಯರಿಬ್ಬರ ಪಾಸ್‌ಪೋರ್ಟ್ ಮಾಡಿಸಿಕೊಳ್ಳಲು ಆಂಧ್ರಪದೇಶದ ವೃದ್ಧ ದಂಪತಿಗೆ ನೆರವಾಗುವ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ಮಾನವೀಯತೆಯನ್ನು ಮೆರೆದಿದ್ದಾರೆ. ಟ್ವಿಟರ್‌ನಲ್ಲಿ ಎಸ್‌ಒಎಸ್ ಸಂದೇಶಗಳಿಗೆ ಕ್ಷಿಪ್ರವಾಗಿ ಸ್ಪಂದಿಸುವಲ್ಲಿ ಹೆಸರಾಗಿರುವ ಅವರು ಸಾಮಾಜಿಕ ಬದಲಾವಣೆಗಾಗಿ ಆನ್‌ಲೈನ್ ವೇದಿಕೆಯಾಗಿರುವ ಚೇಂಜ್ ಡಾಟ್ ಆರ್ಗ್‌ನ ಮನವಿಗೂ ಅಷ್ಟೇ ಚುರುಕಾಗಿ ಸ್ಪಂದಿಸಿದ್ದಾರೆ. ದಂಪತಿಯ ನೆರವಿಗಾಗಿ ಪಾಸ್‌ಪೋರ್ಟ್ ಅಧಿಕಾರಿಗಳನ್ನೇ ಅವರ ಮನೆಗೆ ರವಾನಿಸಿದ್ದಾರೆ.

 ತಮ್ಮ ಅಂಗವಿಕಲ ಪುತ್ರಿಯರ ಪಾಸ್‌ಪೋರ್ಟ್ ಮಾಡಿಕೊಡಲು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳು ಮಂಗಳವಾರ ನೆಲ್ಲೂರಿನ ತಮ್ಮ ಮನೆಬಾಗಿಲು ತಟ್ಟಿದಾಗ ರಾಳಪಲ್ಲಿ ರಾಮ ಸುಬ್ಬಾರಾವ್(75) ಮತ್ತು ಅವರ ಪತ್ನಿ ಸುಬ್ಬಲಕ್ಷ್ಮೀ(70) ಅವರ ಆನಂದಕ್ಕೆ ಪಾರವೇ ಇರಲಿಲ್ಲ.

ಪೋಲಿಯೋ ಪೀಡಿತ ಪುತ್ರಿಯರ ಬವಣೆ ಮತ್ತು ಪಾಸ್‌ಪೋರ್ಟ್ ಕಚೇರಿಯಲ್ಲಿ ಅವರನ್ನು ಖುದ್ದಾಗಿ ಹಾಜರು ಪಡಿಸಲು ತನ್ನ ಸಮಸ್ಯೆಗಳ ಕುರಿತು ನಿವೃತ್ತ ತಹಶೀಲ್ದಾರ್ ರಾವ್ ಸೋಮವಾರವಷ್ಟೇ ಚೇಂಜ್ ಡಾಟ್ ಆರ್ಗ್‌ನಲ್ಲಿ ಮನವಿಯನ್ನು ಸಲ್ಲಿಸಿದ್ದರು. ರಾತ್ರಿಯೇ ಟ್ವೀಟ್ ಮಾಡಿದ್ದ ಸುಷ್ಮಾ,‘‘ನಿಮ್ಮ ಮನವಿಯನ್ನು ಓದಿದ್ದೇನೆ. ನಿಮಗೆ ನಾವು ಖಂಡಿತವಾಗಿಯೂ ನೆರವಾಗುತ್ತೇವೆ ’’ಎಂದು ಭರವಸೆ ನೀಡಿದ್ದರಲ್ಲದೆ ಅವರ ವೈಯಕ್ತಿಕ ವಿವರಗಳನ್ನು ಕೋರಿದ್ದರು.

ಮಂಗಳವಾರ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳು ರಾವ್ ಮನೆಗೆ ಬಂದು ಅಗತ್ಯ ಪ್ರಕ್ರಿಯೆಯನ್ನು ಪೂರೈಸಿದರೆ, ಜಿಲಾ ಸ್ಪೆಷಲ್ ಬ್ರಾಂಚ್ ಪೊಲೀಸರೂ ತಮ್ಮ ಪಾಲಿನ ಕೆಲಸಗಳನ್ನು ಮಾಡಿಕೊಟಿದ್ದಾರೆ.

40 ವರ್ಷಗಳ ಕಾಲ ತಮ್ಮ ಅಂಗವಿಕಲ ಪುತ್ರಿಯರನ್ನು ಕಣ್ಣರೆಪ್ಪೆಗಳಂತೆ ನೋಡಿಕೊಂಡಿರುವ ಈ ವೃದ್ಧದಂಪತಿಗಳು ಅವರನ್ನು ವಿದೇಶದಲ್ಲಿ ನೆಲೆಯಾಗಿರುವ ಪುತ್ರರ ರಕ್ಷಣೆಯಲ್ಲಿ ಬಿಡಲು ನಿರ್ಧರಿಸಿದ್ದಾರೆ, ಹೀಗಾಗಿ ಅವರ ಪಾಸ್‌ಪೋರ್ಟ್‌ಗಳನ್ನು ಮಾಡಿಸುವುದು ಅಗತ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News