×
Ad

500 ಕೋಟಿ ಹವಾಲಾ ಕಾಂಡ ಬಯಲು ಮಾಡಿದ ಎಸ್ಪಿಗೆ ನೋಟೀಸಿನ ಬಹುಮಾನ ಕೊಟ್ಟ ಗೃಹ ಸಚಿವ !

Update: 2017-01-24 22:36 IST

ಭೋಪಾಲ್: ಮಧ್ಯಪ್ರದೇಶದಲ್ಲಿ 500 ಕೋಟಿ ರೂ. ಹವಾಲಾ ಹಗರಣವನ್ನು ಭೇದಿಸಿದ ಕಾಟ್ನಿ ಜಿಲ್ಲಾ ಎಸ್‌ಪಿ ಗೌರವ್ ತಿವಾರಿ, ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಎಸ್ಪಿ ಗೌರವ್ ಅವರು ಜಾರಿಗೊಳಿಸಿದ ಆದೇಶವೊಂದರಲ್ಲಿ, ಯಾವುದೇ ಪೊಲೀಸ್ ಠಾಣೆ ಅಥವಾ ಚೌಕಿಯ ಯಾವುದೇ ಪೊಲೀಸ್ ಉದ್ಯೋಗಿ, ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಲ್ಲಿ ,ಅಲ್ಲಿನ ಠಾಣಾಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಲಾಗುವುದು ಎಂದು ತಿಳಿಸಿದ್ದರು. ಈ ಆದೇಶದ ಒಂದು ಪ್ರತಿಯು ಗೃಹ ಸಚಿವ ಭೂಪೇಂದ್ರ ಸಿಂಗ್ ಅವರಿಗೂ ಕಳುಹಿಸಲಾಗಿದ್ದು, ಅದನ್ನು ಓದಿ ಅವರು ಕೆಂಡಾಮಂಡಲವಾಗಿದ್ದಾರೆ.

   ಎಸ್ಪಿ ಗೌರವ್ ತಿವಾರಿಯ ಆದೇಶ ತಪ್ಪೆಂದು ಗೃಹ ಸಚಿವ ಭೂಪೇಂದ್ರ ಸಿಂಗ್ ಅಸಮಾಧಾನ ವ್ಯಕ್ದಪಡಿಸಿದ್ದಾರೆ. ಒಂದು ವೇಳೆ ಟ್ರಾಫಿಕ್ ಇನ್ಸ್‌ಪೆಕ್ಟರ್ ತಪ್ಪು ಮಾಡಿದಲ್ಲಿ, ಎಸ್ಪಿಯನ್ನು ಅಮಾನತುಗೊಳಿಸಬೇಕೇ ಎಂದವರು ಪ್ರಶ್ನಿಸಿದ್ದಾರೆ. ಯಾವುದೇ ಪೊಲೀಸ್ ಉದ್ಯೋಗಿ ತಪ್ಪು ಮಾಡಿದಲ್ಲಿ, ಅದರ ಜವಾಬ್ದಾರಿಯನ್ನು ಠಾಣಾಧಿಕಾರಿ ಯಾಕೆ ವಹಿಸಿಕೊಳ್ಳಬೇಕು ಎಂದಿದ್ದಾರೆ. ಎಸ್ಪಿ ಗೌರವ್ ಅವರ ಆದೇಶದ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹ ಸಚಿವರು ಸೂಚನೆ ನೀಡಿದ್ದು, ಒಂದು ವೇಳೆ ಆದೇಶವು ಅಕ್ರಮವೆಂದು ಮನಗಂಡಲ್ಲಿ, ಎಸ್ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.

ಆದರೆ ಎಸ್ಪಿ ಗೌರವ್ ತಿವಾರಿ, ತಾನು ಜಾರಿಗೊಳಿಸಿದ ಆದೇಶವು ಸರಕಾರದ ನಿಯಮಾವಳಿಗೆ ಅನುಗುಣವಾಗಿಯೇ ಇದೆಯೆಂದು ಸಮರ್ಥಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಈ ಆದೇಶವನ್ನು ರಾಜ್ಯ ಪೊಲೀಸ್ ಪ್ರಧಾನ ಕಾರ್ಯಾಲಯವು ಜಾರಿಗೊಳಿಸಿತ್ತು. ತಾನು ಆ ಆದೇಶವನ್ನು ಪಾಲಿಸುತ್ತಿದ್ದೇನಷ್ಟೇ ಎಂದವರು ಹೇಳಿದ್ದಾರೆ. ತನಗೆ ಸರಕಾರದಿಂದ ತನಗೆ ಇನ್ನೂ ನೋಟಿಸ್ ಬಂದಿಲ್ಲವೆಂದು ಗೌರವ್ ತಿಳಿಸಿದ್ದು, ಅದು ಬಂದ ಮೇಲಷ್ಟೇ ಉತ್ತರ ನೀಡುವೆ ಎಂದು ತಿಳಿಸಿದ್ದಾರೆ.

ಜನಮೆಚ್ಚಿದ ಎಸ್ಪಿ: ಎಸ್ಪಿ ಗೌರವ್ ತಿವಾರಿಯವರ ಕಾರ್ಯನಿರ್ವಹಣೆಯು ಕಾಟ್ನಿ ಜಿಲ್ಲೆಯ ಜನತೆಗೆ ಅಪಾರ ಮೆಚ್ಚುಗೆಯಿದೆ.ಅವರೊಬ್ಬ ಪ್ರಾಮಾಣಿಕ ಹಾಗೂ ದಕ್ಷ ಪೊಲೀಸ್ ಅಧಿಕಾರಿಯೆಂದೇ ಜನಪ್ರಿಯರಾಗಿದಾರೆ. 5 ಕೋಟಿ ಹವಾಲಾಕಾಂಡವನ್ನು ಭೇದಿಸಿದ ಬಳಿಕ ಗೌರವ್ ತಿವಾರಿಯವರನ್ನು ತನಿಖೆಯಿಂದ ಮುಕ್ತಗೊಳಿಸಲಾಗಿತ್ತು. ಆನಂತರ ಅವರ ಕಚೇರಿಯ ಮುಂದೆ ಪ್ರತಿದಿನವೂ ಜನಸಂದಣಿ ಕಂಡುಬರುತ್ತಿದೆ. ಫೇಸ್‌ಬುಕ್‌ನಲ್ಲಿ ಗೌರವ್‌ಗೆ 14 ಸಾವಿರಕ್ಕೂ ಅಧಿಕ ಫಾಲೋವರ್‌ಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News