ಇನ್ನು ನಿಮ್ಮೂರಿನಲ್ಲೇ ಪಾಸ್‌ಪೋರ್ಟ್ ಗೆ ಅರ್ಜಿ ಸಲ್ಲಿಸಿ !
ಹೊಸದಿಲ್ಲಿ, ಜ. 24: ಪಾಸ್ ಪೋರ್ಟ್ ಸೇವೆಗಳನ್ನು ಇನ್ನಷ್ಟು ಸರಳಗೊಳಿಸುವುದರ ಸಲುವಾಗಿ ವಿದೇಶಾಂಗ ಇಲಾಖೆ ಹೊಸ ಕ್ರಮವೊಂದನ್ನು ಕೈಗೊಂಡಿದೆ. ಅದರ ಅನುಸಾರ ಪಾಸ್ ಪೋರ್ಟ್ ಸೇವಾಕೇಂದ್ರಗಳು(PSK) ಇಲ್ಲದ ಪ್ರದೇಶಗಳಲ್ಲಿರುವ ಮುಖ್ಯ ಅಂಚೆ ಕಚೇರಿಗಳು(Head Post Offices) ಇನ್ನು ಮುಂದೆ ಪಾಸ್ ಪೋರ್ಟ್ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಇದನ್ನು ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರಗಳೆಂದು(POPSK) ಕರೆಯಲಾಗುತ್ತದೆ.
ಇದರ ಆರಂಭಿಕವೆಂಬಂತೆ ನಾಳೆ ಅಂದರೆ ಜನವರಿ 25, 2017ರಂದು ಮೈಸೂರು ಹಾಗೂ ಗುಜರಾತಿನ ಧಾಹೊಡಿನಲ್ಲಿರುವ ಮುಖ್ಯ ಅಂಚೆ ಕಚೇರಿಗಳು ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಣೆ ಆರಂಭಿಸಲಿದೆ.
ಆನ್ಲೈನ್ ನಲ್ಲಿ ಅಪಾಯಿಂಟ್ಮೆಂಟ್ ಕಾಯ್ದಿರಿಸುವವರು ಇನ್ನು ಮುಂದೆ ಈ ಕೇಂದ್ರಗಳನ್ನು ಕೂಡಾ ಆಯ್ಕೆ ಮಾಡಿಕೊಂಡು ಸೇವೆಗಳನ್ನು ಪಡೆದುಕೊಳ್ಳಬಹುದು. ಈ ಕೇಂದ್ರಗಳಲ್ಲಿನ ಯಶಸ್ಸನ್ನು ಅವಲಂಬಿಸಿ ಅತಿ ಶೀಘ್ರವಾಗಿ ಈ ಯೋಜನೆಯನ್ನು ದೇಶದ ಇತರೆಡೆಗೂ ವಿಸ್ತರಿಸುವ ಯೋಜನೆ ವಿದೇಶಾಂಗ ಇಲಾಖೆಗಿದೆ.
ಪ್ರಸಕ್ತ ದೇಶಾದ್ಯಂತ ಒಟ್ಟು 89 ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ನಾಲ್ಕು ಹೊಸ ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಕ್ರಮವಾಗಿ ಮಧ್ಯಪ್ರದೇಶದ ಇಂದೋರ್, ಮಹಾರಾಷ್ಟ್ರದ ಶೋಲಾಪುರ, ರಾಜಸ್ತಾನದ ಉದಯಪುರ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಾರ್ಯಾರಂಭ ಮಾಡಲಿದೆ. ಇವುಗಳ ಜೊತೆಗೆ ದೇಶಾದ್ಯಂತವಿರುವ ಮುಖ್ಯ ಅಂಚೆ ಕಚೇರಿಗಳಲ್ಲಿಯೂ ಪಾಸ್ ಪೋರ್ಟ್ ಸೇವೆ ಆರಂಭವಾದರೆ, ಭಾರತೀಯ ನಾಗರಿಕರಿಗೆ ಪಾಸ್ ಪೋರ್ಟ್ ಪಡೆದುಕೊಳ್ಳುವುದು ತುಂಬಾ ಸರಳವಾಗಲಿದೆ.