×
Ad

ಬೆಳ್ತಂಗಡಿ ಸರಕಾರಿ ನೌಕರರ ಸಂಘದಿಂದ ವೆಬ್‌ಸೈಟ್‌ಗೆ ಚಾಲನೆ

Update: 2017-01-24 23:27 IST

ಬೆಳ್ತಂಗಡಿ , ಜ.24 : ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಅನುದಾನ ಮಂಜೂರುಗೊಳಿಸಿದರೆ ಇದನ್ನು ಸಮರ್ಪಕವಾಗಿ ಬಳಕೆಯಾಗುವಂತೆ ಮಾಡುವುದು ಅಧಿಕಾರಿಗಳು. ಸರಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಸೌಹಾರ್ದತೆ ಮತ್ತು ಪ್ರಾಮಾಣಿಕ ಸೇವೆ ಮಾಡಿದಾಗ ತಾಲೂಕಿನ ಅಭಿವೃದ್ಧಿ ಸಾಧ್ಯ ಎಂದು ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದ್ದಾರೆ.

ಅವರು ಮಂಗಳವಾರ ಬೆಳ್ತಂಗಡಿ ಸಂತೆಕಟ್ಟೆ ಬಳಿ ರಾಜ್ಯ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಸರಕಾರಿ ನೌಕರರ ಸಂಘದಿಂದ ಅಭಿನಂದನೆ ಸ್ವೀಕರಿಸಿ, ಸರಕಾರಿ ನೌಕರರ ಸಂಘದ ವೆಬ್‌ಸೈಟ್ ಅನಾವರಣಗೊಳಿಸಿ ಮತ್ತು ತಾ. ಪಂ. ಜಿ. ಪಂ. ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳನ್ನು ಸನ್ಮಾನಿಸಿ ಮಾತನಾಡಿದರು.

1983ರಿಂದ ಜನಪ್ರತಿನಿಧಿಯಾಗಿ ತಾಲೂಕಿನ ಅಭಿವೃದ್ಧಿಗೆ ನನ್ನದೇ ಆದ ಕೊಡುಗೆಯನ್ನು ನೀಡಿದ್ದೇನೆ. ಇದೀಗ ರಾಜ್ಯ ಸರಕಾರ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು , ಈ ಹುದ್ದೆ ಸ್ವೀಕರಿಸಬೇಕಾದರೆ ತಾಲೂಕಿನ ಅಭಿವೃದ್ಧಿಗೆ 500 ಕೋಟಿ ಮಂಜೂರುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟಿದ್ದೆ. ಇದೀಗ 100 ಕೋಟಿ ರೂ. ಮಂಜೂರುಗೊಳಿಸುವ ಭರವಸೆ ನೀಡಿದ್ದು ಪ್ರತೀ ಗ್ರಾಮಗಳ ಅಭಿವೃದ್ಧಿಗೆ ಬಳಸಲಾಗುವುದು. ಇದನ್ನು ಬಿಡುಗಡೆಗೊಳಿಸಲು ಪ್ರತಿನಿತ್ಯ ಸರಕಾರದ ಮೇಲೆ ಒತ್ತಡ ತರುತ್ತಿದ್ದೇನೆ ಎಂದರು.

ತಾಲೂಕಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಹಾಗೂ ತಣ್ಣೀರುಪಂತದಲ್ಲಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇನೆ. ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಪ್ರಪ್ರಥಮ ಬಾರಿ ಕೈಗಾರಿಕೆಯಾಗಿ ಮೇಲಂತಬೆಟ್ಟುವಿನಲ್ಲಿ ಮೀಸಲಿಟ್ಟ 10 ಎಕ್ರೆ ಜಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಚಾಲನೆ ನೀಡಿ ಯುವಕರು ಸ್ವಉದ್ಯೋಗ ಮಾಡಲು ಪ್ರೇರೇಪಿಸುವ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಮಾಡಲು ಬೆಳ್ತಂಗಡಿಯಲ್ಲೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಜಿ. ಪಂ. ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೆ ಶಾಹುಲ್ ಹಮೀದ್ ಮಾತನಾಡಿ,  ಸರಕಾರಿ ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಮಾನವೀಯ ಗುಣವಿದ್ದಾಗ ಅಭಿವೃದ್ಧಿ ನಿಶ್ಚಿತ ಎಂದರು.

ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಜಯಕೀರ್ತಿ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ , ಬೆಳ್ತಂಗಡಿ ತಾಲೂಕು ಸರಕಾರಿ ನೌಕರರ ಸಂಘವು ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು,  ಇದೀಗ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸರಕಾರಿ ನೌಕರರ ಸಂಘದ ವೆಬ್‌ಸೈಟ್ ಪ್ರಾರಂಭಿಸಿ ಸಂಘದ ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿಸಿಗುವಂತೆ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಿ. ಪಂ. ಸದಸ್ಯರುಗಳಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕೆ, ಶಾಹುಲ್ ಹಮೀದ್, ತಾ. ಪಂ. ಸದಸ್ಯರುಗಳಾದ ದಿವ್ಯಜ್ಯೋತಿ, ಗೋಪಿನಾಥ ನಾಯಕ್, ಜಯಶೀಲ, ಸೆಬಾಸ್ಟಿಯನ್, ಜಯರಾಮ್, ವಿನುಷಾ ಪ್ರಕಾಶ್, ಸುಜಾತ, ಕೇಶವತಿ, ರೂಲತಾ ಇವರನ್ನು ಸನ್ಮಾನಿಸಲಾಯಿತು.

ತಾ. ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ, ಸಂಘದ ಗೌರವ ಅಧ್ಯಕ್ಷ ಸಿ ಆರ್ ನರೇಂದ್ರ ಉಪಸ್ಥಿತರಿದ್ದರು. ಪದ್ಮಪ್ರಸಾದ್ ವೆಬ್‌ಸೈಟ್ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News