×
Ad

ಕಾಂಪೋಸ್ಟ್ ಪೈಪು ವಿತರಣೆಯಲ್ಲಿ ಅವ್ಯವಹಾರ : ಆರ್ಯಾಪು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ

Update: 2017-01-24 23:36 IST

ಪುತ್ತೂರು , ಜ.24  : ಪಂಚಾಯತ್ ವತಿಯಿಂದ ವಿತರಿಸಲಾದ ಕಾಂಪೋಸ್ಟ್ ಪೈಪು ವಿತರಣೆಯಲ್ಲಿ ಅವ್ಯವಹಾರ ನಡೆದಿದೆ. ಫಲಾನುಭವಿಗಳ ಪಟ್ಟಿ ಯಲ್ಲಿರುವ ಎಲ್ಲಾ ಫಲಾನುಭವಿಗಳಿಗೆ ಪೈಪು ವಿತರಿಸಲಾಗಿಲ್ಲ ಎಂದು ಪುತ್ತೂರು ತಾಲೂಕಿನ ಹಂಟ್ಯಾರು ಶಾಲೆಯಲ್ಲಿ ಮಂಗಳವಾರ ನಡೆದ ಆರ್ಯಾಪು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದರು.

ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಎಂ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು.

ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಇಬ್ರಾಹಿಂ ಇಡಬೆಟ್ಟು, ಸಲಾಂ ಮತ್ತಿತರರು 820 ಮಂದಿ ಫಲಾನುಭವಿಗಳಿಗೆ ಕಾಂಪೋಸ್ಟ್ ಪೈಪು ವಿರತಣೆ ಮಾಡಲಾಗಿದೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಆದರೆ ದಾಖಲೆಯಲ್ಲಿರುವ ಎಲ್ಲಾ ಫಲಾನುಭವಿಗಳಿಗೆ ಕಾಂಪೋಸ್ಟ್ ಪೈಪು ನೀಡಲಾಗಿಲ್ಲ . ಈ ಕಾಂಪೋಸ್ಟ್ ಪೈಪುಗಳು ಎಲ್ಲಿದೆ , ಯಾರ ಮನೆಗೆ ಕೊಟ್ಟಿದ್ದೀರಿ ಎಂಬುವುದನ್ನು ಸಭೆಯಲ್ಲಿ ತಿಳಿಸಬೇಕು ಎಂದು ಆಗ್ರಹಿಸಿದರು.

 ಈ ಸಂದರ್ಭದಲ್ಲಿ ಅಧ್ಯಕ್ಷೆ ಗೀತಾ ಎಂ ಅವರು ಸಭೆಯ ಬಳಿಕ ಗ್ರಾಮ ಪಂಚಾಯತ್ ಕಚೇರಿಗೆ ಬನ್ನಿ, ಅಲ್ಲಿ ಮಾಹಿತಿ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಅಧ್ಯಕ್ಷರ ಉತ್ತರದಿಂದ ತೃಪ್ತರಾಗದ ಗ್ರಾಮಸ್ಥರು ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಎಲ್ಲರೂ ಇಲ್ಲೇ ಇರುವಾಗ ನಾವು ಪಂಚಾಯತ್‌ಗೆ ಯಾಕೆ ಬರಬೇಕು ಎಂದು ಪ್ರಶ್ನಿಸಿ , ಇಲ್ಲೇ ನಮಗೆ ಉತ್ತರ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗೂ ಅಧಿಕಾರಿಗಳ ಉತ್ತರ ಸಿಗದ ಕಾರಣ ಗ್ರಾಮಸ್ಥರು ಪಂಚಾಯತ್ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಯಿತು. ಬಳಿಕ ಆರೋಪ ಮಾಡಿದ ಗ್ರಾಮಸ್ಥರು ಸಭೆಯಿಂದ ಹೊರನಡೆದರು.

ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವ , ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಅಭಿವೃದ್ಧಿ ಅಧಿಕಾರಿ ಜಗದೀಶ್ ,ಕಾರ್ಯದರ್ಶಿ ಪದ್ಮಕುಮಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News