18 ಚಿನ್ನದ ಪದಕ ಮಡಿಲಿಗೆ ಹಾಕಿಕೊಂಡ ಕೇರಳದ ಕುವರಿ, ಅಣ್ಣನ ಓದಿಗೆ ತಮ್ಮನ ತ್ಯಾಗ

Update: 2017-01-25 07:20 GMT

ಬಾಗಲಕೋಟೆ, ಜ.25: ಕುಗ್ರಾಮದ ರೈತನ ಮಗನಾಗಿ ಆರ್ಥಿಕ ಸಂಕಷ್ಟದಿಂದ ಓದು ನಿಲ್ಲಿಸಿ ಅಣ್ಣನ ಬಂಗಾರದ ಸಾಧನೆಗೆ ಸಾಥ್ ನೀಡಿದ ತಮ್ಮ ಒಂದು ಕಡೆಯಾದರೆ, ವಕೀಲ-ಶಿಕ್ಷಕಿಯ ಮಗಳಾಗಿ ಗರಿಷ್ಠ 18 ಚಿನ್ನದ ಪದಕ ಬೇಟೆಯಾಡಿದ ಸಾಹಸಿಯ ಯಶೋಗಾಥೆ ಇನ್ನೊಂದೆಡೆ. ಒಬ್ಬರಿಗೆ ಕೃಷಿ ಮತ್ತು ತೋಟಗಾರಿಕೆಯಲ್ಲಿ ಉತ್ತಮ ಶಿಕ್ಷಣ ನೀಡಿ ಅತ್ಯುತ್ತಮ ರೈತರನ್ನು ಹುಟ್ಟುಹಾಕುವ ಬಯಕೆ; ಮತ್ತೊಬ್ಬರಿಗೆ ರೈತರ ಸಮಸ್ಯೆಗೆ ಸರಳ ಉಪಾಯ ಕಂಡು ಹಿಡಿಯುವ ವಿಜ್ಞಾನಿಯಾಗುವಾಸೆ.

ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ನಡೆದ ಆರನೇ ಘಟಿಕೋತ್ಸವದಲ್ಲಿ ತೋಟಗಾರಿಕೆ ವಿಜ್ಞಾನದಲ್ಲಿ 18 ಚಿನ್ನದ ಪದಕಗಳನ್ನು ಪಡೆದ ಕೇರಳದ ಕೊಯಿಕ್ಕೋಡ್ ನಿವಾಸಿ ಡೆಲ್ನಾ ರೋಸ್ ಸಂಭ್ರಮ ಹಂಚಿಕೊಂಡರು. ಮಲೆಯಾಳಂ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲದ ಅಪ್ಪ–ಅಮ್ಮ ಅವರ ಮುಖ ಭಾವದಲ್ಲಿ ಮಗಳ ಸಾಧನೆ ಅಭಿವ್ಯಕ್ತಗೊಂಡಿತ್ತು.

ಕೋಲಾರದ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಡೆಲ್ನಾ, ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿಯೇ ಅತಿಹೆಚ್ಚು ಚಿನ್ನದ ಪದಕ ಪಡೆದ ಶ್ರೇಯಕ್ಕೆ ಪಾತ್ರರಾದರು. ಈ ಹಿಂದೆ, 2016ರಲ್ಲಿ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ, ಕೇರಳದ ವೈನಾಡಿನ ಅಶ್ವಥಿ ಜ್ಯೋತ್ಸ್ನಾ16 ಚಿನ್ನದ ಪದಕ ಪಡೆದಿದ್ದರು.

ವೈನಾಡು ಜಿಲ್ಲೆಯ ಕಡಪಟ್ಟಿ ಗ್ರಾಮದವರಾದ ಸನ್ನಿಥಾಮಸ್ ಈಗ ಕೊಯಿಕ್ಕೋಡ್‌ನಲ್ಲಿ ವಕೀಲರಾಗಿದ್ದಾರೆ. ರೋಸಮ್ಮ ಪ್ರೌಢಶಾಲಾ ಶಿಕ್ಷಕಿ. ಸಹೋದರ ಡಾನ್‌ರೋಸ್ ಸಿ.ಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಸದ್ಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ನಡೆಸುವ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ 54ನೆ ರ್ಯಾಂಕ್ ಪಡೆದು ಉತ್ತರಾಖಂಡ್‌ನ ಜಿ.ಬಿ.ಪಂತ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಸಸ್ಯರೋಗ ವಿಜ್ಞಾನ ಓದುತ್ತಿರುವ ಡೆಲ್ನಾ, ಮುಂದೆ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರು.

‘ಬೆಂಗಳೂರಿಗೆ ಹತ್ತಿರ ಎಂಬ ಕಾರಣಕ್ಕೆ ಕೋಲಾರದ ತೋಟಗಾರಿಕೆ ಮಹಾವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡೆ. ಆರಂಭದಲ್ಲಿ ಭಾಷೆ ಗೊತ್ತಿರಲಿಲ್ಲ. ಆದರೆ ಸ್ಥಳೀಯ ಸ್ನೇಹಿತರು ಹಾಗೂ ಕಾಲೇಜಿನಲ್ಲಿ ಶಿಕ್ಷಕರ ಸಹಾಯದಿಂದ ಕನ್ನಡ ಕಲಿತೆ’ ಎಂದು ಸ್ಮರಿಸಿದರು.

ಕನ್ನಡ ಮಾಧ್ಯಮದ ವಿದ್ಯಾರ್ಥಿ:  ತರಕಾರಿ ವಿಜ್ಞಾನ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕೊಡಗನೂರಿನ ಮಹಾಂತಗೌಡ ಜಿ.ರಾಜೊಳ್ಳಿ, ಸ್ನಾತಕೋತ್ತರ ವಿಭಾಗದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಶ್ರೇಯವನ್ನು ತಮ್ಮದಾಗಿಸಿಕೊಂಡರು. 

ಕೊಡಗನೂರ, ಡವಳಗಿಯಲ್ಲಿ ಶಾಲಾ ಶಿಕ್ಷಣ ಮುಗಿಸಿರುವ ಮಹಾಂತಗೌಡ ಕನ್ನಡ ಮಾಧ್ಯಮದ ವಿದ್ಯಾರ್ಥಿ. ಬಾಗಲಕೋಟೆಯ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದ್ದು, ಬೀದರ್‌ನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಪದವಿ ಪೂರೈಸಿದ್ದಾರೆ. ಆಗಲೂ ಎರಡನೇ ರ್‍ಯಾಂಕ್ ಪಡೆದಿದ್ದು, ಸದ್ಯ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

‘ನಾವು ಮೂವರು ಮಕ್ಕಳು. ತಂಗಿ ಬಿ.ಇಡಿ ಕಲಿಯುತ್ತಿದ್ದಾಳೆ. ಊರಿನಲ್ಲಿ ಆರು ಎಕರೆ ಒಣಭೂಮಿ ಇದೆ. ಅಪ್ಪ ಗೌಡಪ್ಪಗೌಡ ಹಾಗೂ ಅಮ್ಮ ಶೋಭಾ ಇಬ್ಬರೂ ಹೊಲದ ಕೆಲಸ ಮಾಡುತ್ತಾರೆ. 

‘ಮುಂದೆ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಪಿಎಚ್‌.ಡಿ ಮಾಡುವ ಉದ್ದೇಶವಿದೆ‘ ಎಂದು ಮಹಾಂತಗೌಡ ತಿಳಿಸಿದರು.

ವಿಶ್ವವಿದ್ಯಾಲಯದ ಸಹಕುಲಾಧಿಪತಿಯಾದ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪದಕ ಪ್ರದಾನ ಮಾಡಿದರು. ಭಾರತೀಯ ತೋಟಗಾರಿಕೆ ಸಂಘದ ಅಧ್ಯಕ್ಷ ಡಾ. ಕೆ.ಎಲ್.ಛಡ್ಡಾ ಘಟಿಕೋತ್ಸವ ಭಾಷಣ ಮಾಡಿದರು. ವಿ.ವಿ ಕುಲಪತಿ ಡಾ.ಡಿ.ಎಲ್.ಮಹೇಶ್ವರ್ ಉಪಸ್ಥಿತರಿದ್ದರು.

ನಮ್ಮನ್ನು ಓದಿಸಲು ಅಪ್ಪನಿಗೆ ಕಷ್ಟವಾಗಲಿದೆ ಎಂದು ಎಸೆಸೆಲ್ಸಿಗೆ ಓದು ನಿಲ್ಲಿಸಿದ ಕಿರಿಯ ಸಹೋದರ ರಮೇಶ, ಉಡುಪಿಯಲ್ಲಿ ತರಕಾರಿ ಮಾರಾಟ ಮಾಡುವ ಮೂಲಕ ಮನೆಗೆ ನೆರವಾದ.

-ಮಹಾಂತಗೌಡ ಜಿ.ರಾಜೊಳ್ಳಿ, ಚಿನ್ನದ ಪದಕ ವಿಜೇತ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News