ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಸಂದರ್ಶನದಿಂದ ಎದ್ದ ಬಿಜೆಪಿ ನಾಯಕ ಕಟಿಯಾರ್
ಹೊಸದಿಲ್ಲಿ, ಜ. 25 : ಬಿಜೆಪಿಯ ಹಿರಿಯ ಮುಖಂಡ ವಿನಯ್ ಕಟಿಯಾರ್ ಬಾಯಿಗೆ ಬಂದ ಮಾತನಾಡಿ ನಾಲಗೆ ಕಚ್ಚಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಕುರಿತು ಕೀಳು ಅಭಿರುಚಿಯ ಮಾತನಾಡಿರುವ ಕಟಿಯಾರ್ ಅವರು ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಗ್ಗೆ ಟಿವಿ ವಾಹಿನಿಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಸಂದರ್ಶನವನ್ನು ಅರ್ಧದಲ್ಲೇ ನಿಲ್ಲಿಸಿ ಎದ್ದು ಹೋಗಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ತಮ್ಮ ವರ್ಚಸ್ಸಿನಿಂದ ಕಾಂಗ್ರೆಸ್ ಗೆ ಜಯ ತರುತ್ತಾರೆ ಎಂದು ಕಾಂಗ್ರೆಸ್ಸಿಗರು ಹೇಳಿದ್ದಕ್ಕೆ ತಿರುಗೇಟು ನೀಡಲು ಹೋಗಿ ಕಟಿಯಾರ್ ಸಿಕ್ಕಿ ಬಿದ್ದಿದ್ದಾರೆ. " ಪ್ರಿಯಾಂಕರಿಂದ ಬಿಜೆಪಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ . ಅವರಿಗಿಂತ ಸುಂದರ ಮಹಿಳಾ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ " ಎಂದು ಕಟಿಯಾರ್ ಹೇಳಿಬಿಟ್ಟಿದ್ದಾರೆ.
ಈ ಬಗ್ಗೆ ಸಿಎನ್ ಎನ್ ನ್ಯೂಸ್ 18 ಟಿವಿ ವಾಹಿನಿಯ ಭೂಪೇಂದ್ರ ಚೌಬೆ ಅವರು ಪ್ರಶ್ನಿಸಿದಾಗ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ ಕಟಿಯಾರ್ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
" ಪ್ರಿಯಾಂಕಾ ಬಗ್ಗೆ ನೀವು ಹಾಗೆ ಹೇಳಿದ್ದು ಸರಿಯೇ ? ಮಹಿಳೆಯರನ್ನು ಕೇವಲ ನೀವು ಅವರ ಸೌನ್ದರ್ಯದ ಮಾನದಂಡದಲ್ಲಿ ಅಳೆಯುತ್ತೀರಾ ?" ಎಂದು ಕೇಳಿದ್ದಕ್ಕೆ " ನಾನು ಹಾಗೆ ಹೇಳಿಲ್ಲ. ನಮ್ಮ ಪಕ್ಷದಲ್ಲೂ ಸ್ಮೃತಿ ಇರಾನಿಯಂತಹ ಸುಂದರ ಮಹಿಳಾ ನಾಯಕಿಯರಿದ್ದಾರೆ. ಸುಂದರವಾಗಿರುವುದು ತಪ್ಪೇ ?" ಎಂದು ಹೇಳಿದ್ದಾರೆ. " ಹೀಗೆ ಹೇಳುವ ಮೂಲಕ ನೀವು ಸ್ಮೃತಿ ಇರಾನಿ ಅವರನ್ನು ಅವಮಾನಿಸುತ್ತಿದ್ದೀರಲ್ಲಾ " ಎಂದು ಕೇಳಿದ್ದಕ್ಕೆ ಸಿಟ್ಟಾದ ಕಟಿಯಾರ್ ಸಂದರ್ಶನವನ್ನು ಅರ್ಧದಲ್ಲೇ ನಿಲ್ಲಿಸಿ ಎದ್ದು ಬಿಟ್ಟಿದ್ದಾರೆ.