×
Ad

ಪ್ರಾಣಿ ದಯಾ ಸಂಘದ ಅಧ್ಯಕ್ಷ ರವಿ ಕ್ಷಮೆಯಾಚಿಸಲಿ : ಜನಾರ್ದನ ಬಂಗೇರ ಮುಡಾಯಿಗುತ್ತು

Update: 2017-01-25 18:17 IST

ಬೆಳ್ತಂಗಡಿ , ಜ.25 : ಕಂಬಳ ನಿಷೇಧವನ್ನು ಬೆಂಬಲಿಸಿ ಉದ್ಧಟತನ ತೋರುತ್ತಿರುವ ಹಾಗು ಕಂಬಳವನ್ನು ಬೆಂಬಲಿಸುವ ತುಳುನಾಡಿನ ಗಣ್ಯರನ್ನು  ಅವಮಾನಿಸಿರುವ ಪ್ರಾಣಿ ದಯಾ ಸಂಘದ ಅಧ್ಯಕ್ಷ ರವಿ ಎಂಬುವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು . ಇಲ್ಲದಿದ್ದರೆ ಅಂತಹವರಿಗೆ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ ಎಂದು ತುಳುನಾಡು ಒಕ್ಕೂಟ ಬೆಳ್ತಂಗಡಿ ನಗರ ಅಧ್ಯಕ್ಷ ಜನಾರ್ದನ ಬಂಗೇರ ಮುಡಾಯಿಗುತ್ತು ಎಚ್ಚರಿಸಿದ್ದಾರೆ.

 ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು .

ಅವಿಭಜಿತ ದ.ಕ. ವನ್ನು ಬಂಡವಾಳ ಶಾಹಿಗಳು ವಿವಿಧ ಯೋಜನೆಗಳ ಮೂಲಕ ಬರಡು ಮಾಡಲು ಹೊರಟಿದ್ದಾರೆ. ಇದೀಗ ನಮ್ಮ ತುಳುನಾಡಿನ ಸಂಸ್ಕೃತಿ ಸಂಪ್ರದಾಯದ ಕಂಬಳವನ್ನು ನಿಷೇಧಿಸಲು ಹೊರಟಿರುವುದನ್ನು ಒಕ್ಕೂಟ ತೀವ್ರವಾಗಿ ಖಂಡಿಸಿಸುತ್ತದೆ. ಕಂಬಳಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ತುಳುನಾಡು ಒಕ್ಕೂಟದ ಕೇಂದ್ರೀಯ ಸಮಿತಿ ಅಧ್ಯಕ್ಷ ಶೈಲೇಶ್. ಆರ್.ಜೆ. ಮಾತನಾಡಿ ,  ಜೂಜು, ಕುಡಿತ ನಡೆಯುತ್ತದೆ ಎಂಬ ಕಾರಣ ನೀಡಿ ಕೋಳಿ ಅಂಕ ನಿಷೇಧಿಸಲಾಗುತ್ತಿದೆ. ಜೂಜು ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲಿ.  ಕ್ರಿಕೆಟ್‌ನಲ್ಲಿ ಜೂಜಿದೆ ಎಂದು ಎಲ್ಲಿಯೂ ಅದನ್ನು ನಿಷೇಧಿಸಲಿಲ್ಲ . ಹಾಗೆಯೇ ಜೂಜಿಗೂ ಕೋಳಿ ಅಂಕಕ್ಕೂ ಸಮಬಂಧ ಕಲ್ಪಿಸುವುದು ಬೇಡ ಎಂದರು.

ಗೋಷ್ಠಿಯಲ್ಲಿ ತುಳುನಾಡ ಒಕ್ಕೂಟದ ಕೇಂದ್ರ ಸಮಿತಿ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಏಣಿಂಜೆ, ನಗರ ಸಮಿತಿ ಸಂಚಾಲಕ ವಸಂತ ಬಿ.ಕೆ., ಸದಸ್ಯ ವೆಂಕಪ್ಪ ಕೋಟ್ಯಾನ್ ಇದ್ದರು.
 

ಬಡ ಕೃಷಿಕರು, ಕೃಷಿ ಕೂಲಿ ಕಾರ್ಮಿಕರು ಯಾವುದೇ ಅಧಿಕ ಖರ್ಚು ವೆಚ್ಚವಿಲ್ಲದೆ ಮನರಂಜನೆಗಾಗಿ ನಡೆಸುವ ಕೋಳಿ ಅಂಕಕ್ಕೆ ನಿಷೇಧ ಹೇರಿರುವುದು ಸರಿಯಲ್ಲ ಜಾನಪದ ಕ್ರೀಡೆಯಾಗಿರುವ ಕೋಳಿ ಅಂಕವನ್ನು ಬಹಿರಂಗವಾಗಿ ನಡೆಸಲು ಸರಕಾರ ಅನುಮತಿ ನೀಡಬೇಕು. ನಿಷೇಧ ಹಿಂಪಡೆಯುವಂತೆ ಮಾಡಲು ಕೃಷಿಕರು ಕೂಲಿ ಕಾರ್ಮಿಕರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು.

- ಜನಾರ್ದನ ಬಂಗೇರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News