ಎರಡು ತಿಂಗಳಿಗೊಮ್ಮೆ ಪಡಿತರಕ್ಕೆ ಚಿಂತನೆ: ಸಚಿವ ಖಾದರ್
ಮಂಗಳೂರು, ಜ. 25: ರೇಷನ್ ಪಡೆಯಲು ಗ್ರಾಹಕರ ಅಲೆದಾಟವನ್ನು ತಪ್ಪಿಸುವ ಸಲುವಾಗಿ ಎರಡು ಅಥವಾ ಮೂರು ತಿಂಗಳ ಪಡಿತರವನ್ನು ಒಮ್ಮೆಲೆ ವಿತರಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಈ ಯೋಜನೆ ಜಾರಿಗೆ ಪ್ರಯತ್ನಿಸುವುದಾಗಿ ಹೇಳಿದರು.
ಮುಂದಿನ ವಾರದಲ್ಲಿ ಬಿಪಿಎಲ್ ಕಾರ್ಡ್
ಪಡಿತರ ಚೀಟಿ ಗೊಂದಲವನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ದಿಟ್ಟ ನಿರ್ಧಾರ ಯಶಸ್ಸು ಕಾಣುತ್ತಿದೆ. ಆನ್‌ಲೈನ್ ಮೂಲಕ ಎಪಿಎಲ್ ಕಾರ್ಡ್‌ದಾರರ ದಾಖಲಾತಿ ಆರಂಭಗೊಂಡು ರಾಜ್ಯದಲ್ಲಿ ಇದುವರೆಗೆ 32,148 ಎಪಿಎಲ್ ಕುಟುಂಬಗಳು ಹೊಸ ಪದ್ಥತಿಯ ಮುಖೇನ ಕಾರ್ಡುಗಳನ್ನು ಪಡೆದುಕೊಂಡಿವೆ. ದ.ಕ.ಜಿಲ್ಲೆಯೊಂದರಲ್ಲಿಯೇ 1,898 ಕುಟುಂಬಗಳು ಎಪಿಎಲ್ ಕಾರ್ಡ್ ಪಡೆದಿವೆ. ಇದೀಗ ಮುಂದಿನ ವಾರದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಕೂಡ ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಮುಂದಿನ ತಿಂಗಳಿನಿಂದ ತೊಗರಿ ಬೇಳೆ
ಬಿಪಿಎಲ್ ಕಾರ್ಡ್‌ದಾರರಿಗೆ ಈಗ ವಿತರಿಸಲಾಗುತ್ತಿರುವ ಪಡಿತರದ ಜೊತೆಗೆ 1 ಕೆಜಿ ತೊಗರಿ ಬೇಳೆ ಅಥವಾ ಹಸಿರು ಕಾಳುವನ್ನು ಸಬ್ಸಿಡಿ ದರದಲ್ಲಿ ಮುಂದಿನ ತಿಂಗಳಿನಿಂದ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸನ್‌ಫ್ಲವರ್ ಆಯಿಲ್ ವಿತರಿಸಲು ನಿರ್ಧರಿಸಲಾಗಿದ್ದು, ಪ್ರಸ್ತುತ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.31ರಂದು ಚಾಲನೆ ನೀಡಲಿದ್ದಾರೆ ಎಂದವರು ತಿಳಿಸಿದರು.
ಮುಕ್ತ ಮಾರುಕಟ್ಟೆಯಲ್ಲಿ ಬಿಳಿ ಸೀಮೆ ಎಣ್ಣೆ ಬಿಳಿ ಸೀಮೆ ಎಣ್ಣೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಆದೇಶ ನೀಡಲಾಗಿದೆ. ಉಜ್ವಲ ಯೋಜನೆಯಡಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರುವ ಸೀಮೆಎಣ್ಣೆ ಕಡಿಮೆಯಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಬಿಳಿ ಸೀಮೆಎಣ್ಣೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಮಾರಾಟಗಾರರು ಪರವಾನಿಗೆಯನ್ನು ಪಡೆದುಕೊಳ್ಳಬಹುದು ಎಂದರು.
ಕಂಬಳ: ಅಗತ್ಯಬಿದ್ದರೆ ಸುಗ್ರೀವಾಜ್ಞೆಗೆ ಚಿಂತನೆ
ಕಂಬಳ ಮತ್ತು ಯಕ್ಷಗಾನ ಕರಾವಳಿ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಅದನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಂಬಳ ಪರವಾಗಿದ್ದು, ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಚಂತನೆ ಇದೆ ಎಂದು ಖಾದರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕಂಬಳ ಪರವಾಗಿ ಮಾತಾಡಿದ್ದಾರೆ. ಯಾವುದೇ ಅಡ್ಡಿ, ಆತಂಕಗಳು ಎದುರಾದರೆ ಸುಗ್ರೀವಾಜ್ಞೆ ಹೊರಡಿಸುವುದಕ್ಕೂ ಮುಂದಾಗಲಿದ್ದಾರೆ. ಜ.31ರಂದು ಹೊರ ಬರಲಿರುವ ಕೋರ್ಟ್ ತೀರ್ಪು ಕಂಬಳ ಪರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.