ಬೊಫೋರ್ಸ್: ರಾಜೀವ್‌ಗೆ ಮುಖಭಂಗ ತಪ್ಪಿಸಲು ತನಿಖೆ ನಿಲ್ಲಿಸಿದ್ದ ಸ್ವೀಡನ್

Update: 2017-01-25 14:10 GMT

ವಾಶಿಂಗ್ಟನ್, ಜ. 25: ಆಗಿನ ಪ್ರಧಾನಿ ರಾಜೀವ್ ಗಾಂಧಿ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಬೊಫೋರ್ಸ್ ಶಸ್ತ್ರಾಸ್ತ್ರ ಖರೀದಿ ಹಗರಣದ ಕುರಿತ ತನಿಖೆಯನ್ನು ಸ್ವೀಡನ್ ನಿಲ್ಲಿಸಿತ್ತು ಎಂದು ಇತ್ತೀಚೆಗೆ ಬಹಿರಂಗಗೊಂಡ ಸಿಐಎ ವರದಿಯೊಂದು ಹೇಳಿದೆ.

ತನ್ನ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಗಳ ಬಗ್ಗೆ ತಾನು ನಡೆಸುತ್ತಿದ್ದ ತನಿಖೆಯನ್ನು ರಾಜೀವ್ ಗಾಂಧಿ ಸ್ಟಾಕ್‌ಹೋಮ್‌ಗೆ ಭೇಟಿ ನೀಡಿದ ಬಳಿಕ, 1988ರಲ್ಲಿ ಸ್ವೀಡನ್ ರದ್ದುಪಡಿಸಿತು ಎಂಬುದಾಗಿಯೂ ಸಿಐಎ ವರದಿ ಹೇಳಿದೆ.

1980ರ ದಶಕದಲ್ಲಿ ಭ್ರಷ್ಟಾಚಾರ ಹಗರಣವು ತಲೆಯೆತ್ತಿತು. ಸ್ವೀಡನ್‌ನ ರಕ್ಷಣಾ ಉಪಕರಣಗಳ ಉತ್ಪಾದಕ ಕಂಪೆನಿ ಬೊಫೊರ್ಸ್ ತನ್ನ ಫಿರಂಗಿಗಳನ್ನು ಭಾರತಕ್ಕೆ ಮಾರಾಟ ಮಾಡುವುದಕ್ಕಾಗಿ ರಾಜೀವ್ ಗಾಂಧಿ ಮತ್ತು ಇತರರಿಗೆ ಭಾರೀ ಪ್ರಮಾಣದಲ್ಲಿ ಲಂಚ ಕೊಟ್ಟಿದೆ ಎಂಬ ಆರೋಪಗಳಿಗೆ ಈ ಹಗರಣ ಸಂಬಂಧಿಸಿದೆ.

ರಾಜೀವ್ ಗಾಂಧಿ ಲಂಚ ತೆಗೆದುಕೊಂಡಿದ್ದಾರೆ ಎಂಬುದನ್ನು ತೋರಿಸುವ ಪುರಾವೆಯಿಲ್ಲ ಎಂಬುದಾಗಿ 2004ರಲ್ಲಿ ದಿಲ್ಲಿಯ ನ್ಯಾಯಾಲಯವೊಂದು ಹೇಳಿತು.

ರಾಜೀವ್ ಗಾಂಧಿಯನ್ನು 1991ರಲ್ಲಿ ಎಲ್ಟಿಟಿಇ ಉಗ್ರರು ಹತ್ಯೆಗೈದರು.

ಬೊಫೋರ್ಸ್ ಲಂಚ ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸ್ಟಾಕ್‌ಹೋಮ್ ನಿಲ್ಲಿಸಿದೆ; ಬಹುಷಃ ಮುಂದೆ ಭಾರತೀಯ ಅಧಿಕಾರಿಗಳಿಗೆ ನೀಡಿದ ಲಂಚದ ಮಾಹಿತಿ ಹೊರಬೀಳಬಹುದು ಹಾಗೂ ಇದ ರಾಜೀವ್ ಗಾಂಧಿಗೆ ಮುಜುಗರ ಉಂಟುಮಾಡಬಹುದು ಎಂಬ ಕಾರಣಕ್ಕಾಗಿ ಅದು ಹೀಗೆ ಮಾಡಿರಬಹುದು ಎಂದು ಸಿಐಎ ತನ್ನ 1988ರ ರಹಸ್ಯ ವರದಿಯಲ್ಲಿ ಹೇಳಿದೆ.

ಭಾರತವು 150 ಕೋಟಿ ಡಾಲರ್ (ಸುಮಾರು 10,220 ಕೋಟಿ ರೂಪಾಯಿ) ವೆಚ್ಚದಲ್ಲಿ 155 ಎಂಎಂ ಹೊವಿಟ್ಝರ್ ಫಿರಂಗಿಗಳನ್ನು ಖರೀದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News