ದಾಳಿಗಳಿಗೆ ಬೆದರದೆ ದೇವರ ಮೇಲೆ ವಿಶ್ವಾಸ ಇರಿಸಿ ಬದುಕಿ : ಮಂಗಳೂರು ಬಿಷಪ್
ಅತ್ತೂರು (ಕಾರ್ಕಳ), ಜ.25: ಅತ್ತೂರು ಸಂತ ಲಾರೆನ್ಸ್ ಕಿರು ಬಾಸಿಲಿಕಾದ ನಾಲ್ಕನೆ ದಿನದ ವಾರ್ಷಿಕ ಜಾತ್ರಾ ಮಹೋತ್ಸವದ ಆಚರಣೆ ಬುಧವಾರ ಅದ್ಧೂರಿಯಾಗಿ ಜರಗಿತು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಅಲೋಶಿ ಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ಹಬ್ಬದ ಬಲಿಪೂಜೆಯನ್ನು ಬೆಳಗ್ಗೆ ನೇರವೇರಿಸಲಾಯಿತು.
ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಗಳು ದೇವರ ವಾಕ್ಯವನ್ನು ಸಾರುವ ಕೆಲಸವನ್ನು ಮಾಡಬೇಕಾಗಿದೆ. ಕ್ಷುಲ್ಲಕ ಕಾರಣಗಳನ್ನು ನೀಡಿ ನಾವು ಇಂದು ಅದರಿಂದ ದೂರ ಹೋಗುತ್ತಿದ್ದೇವೆ. ಇಂದಿನ ಸ್ಪರ್ಧಾತ್ಮಕ ಯುಗ ನಮ್ಮನ್ನು ಧಾರ್ಮಿಕ ವಿಷಯಗಳಿಂದ ದೂರ ಮಾಡುತ್ತಿದೆ. ಧರ್ಮಸಭೆಯಲ್ಲಿ ನಾವು ವಿಶ್ವಾಸವನ್ನು ಕಳೆದು ಕೊಂಡರೆ ಯೇಸುವಿನ ನಿಜವಾದ ಸಾಕ್ಷಿಗಳಾಗಲು ಸಾಧ್ಯವಿಲ್ಲ ಎಂದರು.
ಯೇಸುವಿನ ಮಾರ್ಗದಲ್ಲಿ ನಡೆದ ಸಂತ ಲಾರೆನ್ಸ್ ನಮಗೆಲ್ಲಾ ಮಾರ್ಗದರ್ಶಿ. ಬಡವರಿಗಾಗಿ ತಮ್ಮ ಜೀವನವನ್ನೇ ವ್ಯಯಿಸಿ ಸಂತ ಲಾರೆನ್ಸರು ಯೇಸುವನ್ನು ನಿಜವಾಗಿಯೂ ಪ್ರೀತಿಸಿದರು. ಅವರಿಗೆ ದೇವರ ವಾಕ್ಯವನ್ನು ಪ್ರಸಾರ ಮಾಡುವಾಗ ಅವರ ಜೀವನದಲ್ಲಿ ಹಲವಾರು ತೊಡಕುಗಳು ಬಂದರೂ ಸಹ ಅದರಿಂದ ಹಿಂದೆ ಸರಿಯಲಿಲ್ಲ. ಒರಿಸ್ಸಾದ ಕಂದಮಾಲ್‌ನಲ್ಲಿ ಕ್ರೈಸ್ತರ ಮೇಲಿನ ಹಲ್ಲೆ, ಮಂಗಳೂರಿನಲ್ಲಿ ನಡೆದ ಚರ್ಚುಗಳ ಮೇಲಿನ ದಾಳಿಗಳಂತಹ ಕಷ್ಟದ ಸಮಯದಲ್ಲಿಯೂ ಕ್ರೈಸ್ತ ಸಭೆ ಯಾವುದೇ ರೀತಿಯ ಪ್ರತಿಭಟನೆ ಹಲ್ಲೆಗೂ ಹೆದರದೆ ದೇವರ ಮೇಲಿನ ವಿಶ್ವಾಸದಿಂದ ಬದುಕಿದೆ. ಅಂತಹ ವಿಶ್ವಾಸ ಪ್ರತಿಯೊಬ್ಬ ಕ್ರೈಸ್ತ ಅನುಯಾಯಿಯಲ್ಲಿ ಸದಾ ಇರಬೇಕಾ ಗಿದೆ ಎಂದು ಅವರು ತಿಳಿಸಿದರು.
ಮಕ್ಕಳು ಉತ್ತಮ ನಡತೆ, ಸರಿಯಾದ ವೇಷಭೂಷಣ ತೊಡುವುದ ರೊಂದಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮರೆತು ಗೌರವದ ಜೀವನ ನಡೆಸಬೇಕಾ ಗಿದೆ. ಯುವಜನತೆ ಕ್ರೀಸ್ತರ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಮೂಲಕ ಹಾಗೂ ಅವರ ಮೌಲ್ಯಗಳನ್ನು ಮರೆಯದೆ ಉತ್ತಮ ವ್ಯಕ್ತಿಗಳಾಗಿ ಬದುಕ ಬೇಕಾಗಿದೆ. ಕ್ರೈಸ್ತ ಕುಟುಂಬಗಳು ತಮ್ಮ ಮೌಲ್ಯಭರಿತ, ಧಾರ್ಮಿಕ ಪ್ರೇರಣೆ ಯಿಂದ ಕೂಡಿದವುಗಳಾಗಿ ಯೇಸುಸ್ವಾಮಿಯ ವಿಶ್ವಾಸಕ್ಕೆ ಸಾಕ್ಷಿಗಳಾಗಬೇಕು ಎಂದು ಅವರು ಹೇಳಿದರು.
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಪುಣ್ಯ ಕ್ಷೇತ್ರದ ನಿರ್ದೇಶಕ ವಂ.ಜಾರ್ಜ್ ಡಿಸೋಜ, ಸಹಾಯಕ ಧರ್ಮಗುರು ವಂ.ವಿಜಯ್ ಡಿಸೋಜ, ಉಡುಪಿ ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಮಂಗಳೂರು ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ವಿಲಿಯಂ ಮಿನೇಜಸ್ ಹಾಗೂ ಇತರ ಧರ್ಮಗುರುಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಹಳೆ ದೇವಾಲಯದಿಂದ ಹೊಸ ದೇಗುಲದವರೆಗೆ ನಡೆದ ಮೆರವಣಿಗೆಯಲ್ಲಿ ಬೆಸಿಲಿಕಾದ ಸಂಕೇತವಾದ ಶಿಲುಬೆಯನ್ನು ತರಲಾಯಿತು. ಸುಮಾರು 25 ಧರ್ಮಗುರುಗಳು ಇದರಲ್ಲಿ ಪಾಲ್ಗೊಂಡಿದ್ದರು. ಇಂದು ಒಟ್ಟು 10 ಬಲಿಪೂಜೆಗಳು ನಡೆದವು. ಬೆಳಗಿನ ಬಲಿಪೂಜೆಯನ್ನು ಬೆಳ್ತಂಗಡಿ ಸಿರೋ ಮಲಬಾರ್ ಸಭೆಯ ಧರ್ಮಾಧ್ಯಕ್ಷ ಅತಿ ವಂ.ಡಾ ಲಾರೆನ್ಸ್ ಮುಕ್ಕುಝಿ ಕನ್ನಡದಲ್ಲಿ ಅರ್ಪಿಸಿದರು.
ಹಬ್ಬದ ದಿನವಾಗಿರುವ ಇಂದು ರಾಜ್ಯ, ಹೊರ ರಾಜ್ಯಗಳ ಸಾವಿರಾರು ಮಂದಿ ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಆಗಮಿಸಿ ತಮ್ಮ ಹರಕೆಯನ್ನು ತೀರಿಸಿದರು. ಬೃಹತ್ ಗಾತ್ರ ಮೇಣದ ಬತ್ತಿಗಳನ್ನು ಉರಿಸಿ, ಮೊಣಕಾಲಿನಲ್ಲಿ ಮುಖ್ಯ ದ್ವಾರದಿಂದ ಪೂಜಾ ವೇದಿಕೆಯ ವರೆಗೆ ಬಂದು, ಬೆಳ್ಳಿ ಹಾಗೂ ಚಿನ್ನದ ಪ್ರತಿ ರೂಪಗಳನ್ನು ಒಪ್ಪಿಸಿ ಕಂಕಣ ಭಾಗ್ಯ ಹಾಗೂ ಸಂತಾನ ಭಾಗ್ಯದ ಹರಕೆಯನ್ನು ತೀರಿಸಿದರು. ಕೃಷಿ ರೋಗಭಾದೆ ನಿವಾರಣೆಗೆ ಇಲಿ ಹಾಗೂ ಹುಳಗಳ ಬೆಳ್ಳಿಯ ರೂಪವನ್ನು ದೇವಾಲಯಕ್ಕೆ ಅರ್ಪಿಸಲಾಯಿತು.
ತಾಯಂದಿರುವ ತಮ್ಮ ಸಣ್ಣ ಮಕ್ಕಳನ್ನು ಸಂತಲಾರೆನ್ಸ್‌ನ ಮೂರ್ತಿ ಎದುರು ಮಲಗಿಸಿ ಆಶೀರ್ವಾದ ಪಡೆದರು. ಕ್ರೈಸ್ತ ಭಕ್ತಾಧಿಗಳು ಮಾತ್ರವಲ್ಲದೆ ಇತರ ಧರ್ಮಿಯರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರು. ಪವಾಡ ಪುಷ್ಕರಣಿಗೆ ತೆರಳಿ ಅಲ್ಲಿನ ನೀರನ್ನು ತೀಥವಾರ್ಗಿ ಮನೆಗೆ ಕೊಂಡೊಯ್ದರು.