ಕೋಮುವಾದಕ್ಕೆ ಕರಾವಳಿಯ ಯುವಜನತೆ ಬಲಿ: ವಿಶ್ವನಾಥ ರೈ
ಉಡುಪಿ, ಜ.25: ಕೋಮುವಾದಿಗಳು, ದೇವರು, ಧರ್ಮದ ಹೆಸರಿನಲ್ಲಿ ಕರಾವಳಿ ಭಾಗದ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಹಾಡುಹಗಲಲ್ಲಿ ಗೋರಕ್ಷಕ ವೇಷದ ರೌಡಿಗಳು ಅಮಾಯಕ ದನದ ವ್ಯಾಪಾರಿಗಳನ್ನು ಥಳಿಸಿ ಹತ್ಯೆಗೈಯುತ್ತಿದ್ದಾರೆ. ಇವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗುವುದಿಲ್ಲ. ಆದುದರಿಂದ ಯುವಜನತೆ ಕೋಮುವಾದಿ ಶಕ್ತಿಗಳ ಕೈವಶ ಆಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಸಿಐಟಿಯು ಮುಖಂಡ ವಿಶ್ವನಾಥ ರೈ ಹೇಳಿದ್ದಾರೆ.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಎದುರು ಇಂದು ಹಮ್ಮಿಕೊಳ್ಳಲಾದ ಪ್ರಜಾಪ್ರಭುತ್ವ ಉಳಿಸಿ ಮತ್ತು ಕೋಮು ಸಾಮರಸ್ಯ ಬಲಪಡಿಸಿ ಹೋರಾಟ ಮತಪ್ರದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಸಂಘದ ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿ, ಕರಾವಳಿಯಲ್ಲಿ ಕೋಮು ರಾಜಕಾರಣಕ್ಕಾಗಿ ಯುವಕರು ಬಲಿಯಾಗುತ್ತಿದ್ದು, ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ರಾಜ್ಯ ಕೋಮು ಹಾಗೂ ರಾಜಕೀಯ ಗಲಭೆಗಳಲ್ಲಿ ಇಡೀ ದೇಶದಲ್ಲೇ ಎರಡನೆ ಸ್ಥಾನದಲ್ಲಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಸಂಘದ ಅಧ್ಯಕ್ಷ ಯು.ದಾಸ ಭಂಡಾರಿ, ಕೋಶಾಧಿಕಾರಿ ಕವಿರಾಜ್ ಎಸ್., ವಿಠಲ ಪೂಜಾರಿ, ನಳಿನಿ, ಪದ್ಮಾವತಿ, ನಾಗರತ್ನ ಮೊದಲಾದವರು ಉಪಸ್ಥಿತರಿದ್ದರು.