ಸ್ಥಳೀಯ ಆಚರಣೆ, ಸಂಸ್ಕೃತಿಗೆ ಕೇಂದ್ರದ ಪೂರ್ಣ ಬೆಂಬಲ : ಉಡುಪಿಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್
ಉಡುಪಿ, ಜ.25: ಕರಾವಳಿ ಕರ್ನಾಟಕದ ಜನಪದ ಕ್ರೀಡೆಯಾದ ಕಂಬಳಕ್ಕೆ ನಿಷೇಧದ ವಿಚಾರದಲ್ಲಿ ಕೇಂದ್ರ ಸರಕಾರದ ನಿಲುವು ಸ್ಪಷ್ಟವಿದ್ದು, ಸ್ಥಳೀಯ ಆಚರಣೆ ಹಾಗೂ ಸಂಸ್ಕೃತಿಯನ್ನು ಮೋದಿ ಸರಕಾರ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರು ಈ ಕುರಿತು ಮನವಿ ಅರ್ಪಿಸಿದ್ದಾರೆ. ಅದೇ ರೀತಿ ಮಂಗಳೂರಿನ ಸಂಸದ ನಳಿನ್‌ಕುಮಾರ್ ಅವರು ಸಹ ಮಾತನಾಡಿದ್ದಾರೆ. ಸರಕಾರ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುತ್ತದೆ. ವೈವಿಧ್ಯತೆಯೇ ನಮ್ಮ ದೇಶದ ಆಸ್ತಿ. ಗ್ರಾಮೀಣ ಕ್ರೀಡೆಗಳನ್ನು ಕೇಂದ್ರ ಬೆಂಬಲಿಸುತ್ತದೆ ಎಂದರು.
ನ್ಯಾಯಾಲಯ ಈಗಾಗಲೇ ಮಧ್ಯಂತರ ಆದೇಶವನ್ನು ನೀಡಿದೆ. ಅದು ಏನು ಎಂದು ನಾನು ತಿಳಿದುಕೊಳ್ಳುತ್ತೇನೆ. ಕರ್ನಾಟಕ ರಾಜ್ಯ ಸರಕಾರ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಲಿ. ಅವರು ಸುಗ್ರೀವಾಜ್ಞೆಯನ್ನು ತರಲಿ ಅಥವಾ ಬೇರೆ ಯಾವುದೇ ಕ್ರಮಕ್ಕೆ ಮುಂದಾಗಲಿ. ನಾವು ಖಂಡಿತ ಅದನ್ನು ಬೆಂಬಲಿಸುತ್ತೇವೆ ಎಂದರು.
ತ್ರಿವಳಿ ತಲಾಖ್:
ಏಕರೂಪ ನೀತಿ ಸಂಹಿತೆ ಜಾರಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಶಂಕರ್ ಪ್ರಸಾದ್, ಈ ಬಗ್ಗೆ ಕಾನೂನು ಆಯೋಗದಲ್ಲಿ ವಿವರವಾದ ಚರ್ಚೆ ನಡೆಯುತ್ತಿದೆ. ತ್ರಿವಳಿ ತಲಾಖ್ ಕುರಿತಂತೆ ಕೇಂದ್ರ ಸರಕಾರ ಈಗಾಗಲೇ ಸುಪ್ರೀಂ ಕೋರ್ಟ್‌ನ ಎದುರು ತನ್ನ ವಿಚಾರವನ್ನು ಮಂಡಿಸಿದೆ. ತ್ರಿವಳಿ ತಲಾಖ್ ಸಂವಿಧಾನ ವಿರೋಧಿಯಾಗಿದೆ ಎಂದರು.
ನಮ್ಮ ಸಂವಿಧಾನ ಮಹಿಳೆಯರನ್ನು ಗೌರವಿಸುತ್ತದೆ. ಈ ನಿಟ್ಟಿನಲ್ಲಿ ತಲಾಖ್ ನ್ಯಾಯ, ಸಮಾನತೆಗೆ ವಿರೋಧಿಯಾಗಿದೆ. ಹೀಗಾಗಿ ಇದು ಅಸಾಂವಿಧಾನಿಕ. ನಾವು ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ. ಆದರೆ ಇಂಥ ಕುರುಡು ಆಚರಣೆಗಳು ಧರ್ಮದ ಭಾಗವಾಗಬಾರದು ಎಂದರು.
ಪಾಕಿಸ್ತಾನವೂ ಸೇರಿದಂತೆ ವಿಶ್ವದ 20 ಮುಸ್ಲಿಂ ರಾಷ್ಟ್ರಗಳು ತ್ರಿವಳಿ ತಲಾಖ್‌ನ್ನು ಕೈಬಿಟ್ಟಿವೆ. ಜಾತ್ಯತೀತ ಭಾರತದಲ್ಲಿ ಇದು ಯಾಕೆ ಸಾಧ್ಯವಿಲ್ಲ ಎಂದವರು ಪ್ರಶ್ನಿಸಿದರು.
ಮುಂದಿನ ತಿಂಗಳು ಐದು ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ಗೆಲವು ನಿಶ್ಚಿತ. ದೇಶದಲ್ಲಿ ನಡೆದ ಎಲ್ಲಾ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಅದೇ ರೀತಿ ಈ ಬಾರಿ ಐದು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.