ಜ.26ರಂದು ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ
ಮಂಗಳೂರು, ಜ.25: ತೋಟಗಾರಿಕೆ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ , ಜಿಲ್ಲಾಡಳಿತ ಹಾಗೂ ಸಿರಿ ತೋಟಗಾರಿಕೆ ಸಂಘ ಮಂಗಳೂರು ಇವುಗಳ ಸಹಯೋಗದಲ್ಲಿ ಜ.26ರಂದು ಬೆಳಿಗ್ಗೆ 11.30ಕ್ಕೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಂ.ಆರ್.ರವಿ, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಜ.26ರಿಂದ ಜ.29ರವರೆಗೆ ಕದ್ರಿ ಪಾರ್ಕ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು ಎಂದರು.
ಪ್ರದರ್ಶನದಲ್ಲಿ ಈ ಬಾರಿ ಹೂವಿನಲ್ಲಿ ರಾಣಿ ಅಬ್ಬಕ್ಕನ ಪ್ರತಿಕೃತಿ ಪ್ರಮುಖ ಆಕರ್ಷಣೆಯಾಗಿದೆ. ಅಬ್ಬಕ್ಕ ಹಾಗೂ ಕುದುರೆ ಸೇರಿ ಸುಮಾರು 10 ಅಡಿ ಎತ್ತರದ ಪ್ರತಿಕೃತಿ ರಚನೆಯಾಗಲಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ನಿರ್ಮಿಸಿದ ಆನೆ, ಸೈನಿಕರು ಎಲ್ಲ ಸೇರಿ ಸುಮಾರು 9ಅಡಿ ಉದ್ದ ಹಾಗೂ 4 ಅಡಿ ಅಗಲ ಜಾಗದಲ್ಲಿ ಇವೆಲ್ಲ ಸಿದ್ಧಗೊಳ್ಳಲಿದೆ ಎಂದವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು, ಹಿರಿಯರಿಗೆ ಉಚಿತ ಪ್ರವೇಶ
ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ ರೂ.20/- ಮಕ್ಕಳಿಗೆ ರೂ.10/ ಪ್ರವೇಶ ಶುಲ್ಕ ವಿಧಿಸಲಾಗಿದೆ. ಅಧ್ಯಾಪಕರೊಂದಿಗೆ ಬರುವ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ನಾಲ್ಕು ದಿನವೂ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದವರು ಹೇಳಿದರು.
ಲಪುಷ್ಪ ಪ್ರದರ್ಶನದಲ್ಲಿ ಸುಮಾರು 80 ಮಳಿಗೆಗಳನ್ನು ತೆರೆಯಲಾಗಿದ್ದು ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು ಮಳಿಗೆಗಳನ್ನು ತೆರೆಯಲಿದ್ದಾರೆ. ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಹಾಗೂ ಉದ್ದಿಮೆದಾರರಿಂದ ಸಾರ್ವಜನಿಕರು ಖರೀದಿಸಲು ಹಾಗೂ ವೀಕ್ಷಿಸಲು ಅವಕಾಶವಿದೆ. ಲಪುಷ್ಪ ಪ್ರದರ್ಶನದ ಪ್ರಯುಕ್ತ ಹೋಟೆಲ್ ಸಂಘದವರಿಂದ 25 ಮಳಿಗೆಗಳನ್ನು ತೆರೆಯಲಾಗಿದ್ದು, ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತೀ ದಿನ ಸಂಜೆ ವೈವಿಧ್ಯಯ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು, ವಿವಿಧ ಸ್ಪರ್ಧೆಗಳ ವಿಜೇತರಿಗೆ ಜ.29 ರಂದು ಸಾಯಂಕಾಲ 7.30 ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಜಿಲ್ಲೆಯ ಆಯ್ದ 10 ರೈತ ಮಹಿಳೆ, ಸಣ್ಣ, ಅತೀ ಸಣ್ಣ, ಪರಿಶಿಷ್ಟ ಜಾತಿ, ಪಂಗಡದ ತೋಟಗಾರಿಕಾ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಎಂದು ಡಾ.ಎಂ.ಆರ್.ರವಿ ತಿಳಿಸಿದರು. ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಲಕ್ಷ್ಮೀರಾವ್ ಆರೂರು, ಖಜಾಂಚಿ ಎನ್.ವಿ.ಕೆ. ಭಟ್ರಕೋಡಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೇಶ್ ಎಚ್.ಆರ್., ಸಿರಿ ತೋಟಗಾರಿಕಾ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶಾರದಾ ಆಚಾರ್, ಸುಭಾಶ್‌ಚಂದ್ರ ರೈ, ಡಾ.ಭಾರತೀ ನಿರ್ಮಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.