ರಾಜ್ಯಪಾಲರನ್ನು ಕಿತ್ತೊಗೆಯುವಂತೆ ಪ್ರಧಾನಿಗೆ ರಾಜಭವನದ 80 ಕ್ಕೂ ಹೆಚ್ಚು ಉದ್ಯೋಗಿಗಳಿಂದಲೇ ಪತ್ರ !
ಶಿಲ್ಲಾಂಗ್,ಜ.26 :ಮೇಘಾಲಯದ ರಾಜ್ಯಪಾಲ ವಿ ಷಣ್ಮುಗನಾಥನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದು ಕೋರಿ ರಾಜಧಾನಿ ಶಿಲ್ಲಾಂಗ್ ನಲ್ಲಿರುವ ರಾಜಭವನದ ಸುಮಾರು 80 ಮಂದಿ ಸಿಬ್ಬಂದಿಗಳು ಪ್ರಧಾನಿ ಕಾರ್ಯಾಲಯ ಹಾಗೂ ರಾಷ್ಟ್ರಪತಿ ಭವನಕ್ಕೆ ಐದು ಪುಟಗಳ ಪತ್ರವೊಂದನ್ನು ಕಳುಹಿಸಿದ್ದಾರೆ. ಪತ್ರಕ್ಕೆ ಸಹಿ ಹಾಕಿದವರಲ್ಲಿ ಅಧಿಕಾರಿಗಳಿಂದ ಹಿಡಿದು ಅಟೆಂಡರುಗಳು ಸೇರಿದ್ದಾರೆ.
‘‘ಷಣ್ಮುಗಂ ಅವರ ಕಾರ್ಯಚಟುವಟಿಕೆಗಳು ರಾಜಭವನದ ಶಿಷ್ಟಾಚಾರಕ್ಕೆ ಹಾಗೂ ಘನತೆಗೆ ಧಕ್ಕೆ ತಂದಿವೆಯಲ್ಲದೆ ರಾಜಭವನದ ಸಿಬ್ಬಂದಿಯ ಭಾವನೆಗಳನ್ನೂ ಘಾಸಿಗೊಳಿಸಿವೆ,’’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ‘‘ಅವರ ಕಾರ್ಯಚಟುವಟಿಕೆಗಳು ರಾಜಭವನವನ್ನು ‘‘ಯವತಿಯರ ಕ್ಲಬ್’’ ಆಗಿ ಮಾರ್ಪಡಿಸಿದೆ ಹಾಗೂ ಅಲ್ಲಿನ ಸಿಬ್ಬಂದಿಗೆ ತೀವ್ರ ಮಾನಸಿಕ ಒತ್ತಡ, ಹಿಂಸೆ ಹಾಗೂ ಅವಮಾನವುಂಟು ಮಾಡಿದೆ,’’ ಎಂದು ದೂರಲಾಗಿದೆ.
68 ವರ್ಷದ ಷಣ್ಮುಗಂ ಅವರು ಹಿರಿಯ ಆರೆಸ್ಸೆಸ್ ಕಾರ್ಯಕರ್ತರಾಗಿದ್ದು, ತಮಿಳುನಾಡಿನವರಾದ ಅವರನ್ನು ಮೇ 20, 2015ರಂದು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಅದೇ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಅವರಿಗೆ ಅರುಣಾಚಲ ಪ್ರದೇಶದ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿತ್ತು.ಒಂದು ವರ್ಷದ ಕಾಲ ಅವರು ಮಣಿಪುರದ ಹೆಚ್ಚುವರಿ ಜವಾಬ್ದಾರಿಯನ್ನೂ ಹೊತ್ತಿದ್ದರು.‘‘ರಾಜ್ಯಪಾಲರ ನೇರ ಆದೇಶದಂತೆ ಯುವತಿಯರು ಬಂದು ಹೋಗುವ ಸ್ಥಳವಾಗಿ ರಾಜಭವನ ಪರಿವರ್ತಿತವಾಗಿದೆ. ರಾಜ್ಯಪಾಲರ ನಿವಾಸದ ಸುರಕ್ಷಾ ವ್ಯವಸ್ಥೆಗೂ ಇದು ಧಕ್ಕೆ ತರುವುದು,’’ಎಂದು ಪತ್ರ ತಿಳಿಸಿದೆ.
ಸದ್ಯ ಇಟಾನಗರದಲ್ಲಿರುವ ರಾಜ್ಯಪಾಲ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ರಾಜ್ಯಪಾಲರ ಕಾರ್ಯದರ್ಶಿ ಎಚ್ ಎಂ ಶಂಗ್ಪಿಲಿಯಾಂಗ್ ಅವರ ಪ್ರಕಾರ ಅವರು ಶಿಲ್ಲಾಂಗ್ ಪ್ರೆಸ್ ಕ್ಲಬ್ಬಿನಲ್ಲಿದ್ದ ಪತ್ರಕರ್ತರೊಂದಿಗೆ ಟೆಲಿಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಿದ್ದು ಈ ಸಂದರ್ಭ ತಮ್ಮ ವಿರುದ್ಧ ಮಾಡಲಾದ ಆರೋಪಗಳನ್ನು ನಿರಾಕರಿಸಿದ್ದಾರೆ.
ತರುವಾಯ ದಿ ಹೈಲ್ಯಾಂಡ್ ಪೋಸ್ಟ್ ನಲ್ಲಿ ಜನವರಿ 24ರಂದು ರಾಜ್ಯಪಾಲರ ವಿರುದ್ಧದ ಆರೋಪಗಳ ಬಗೆಗಿನ ವರದಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಪಿ ಆರ್ ಓ ಹುದ್ದೆಗಾಗಿ ಬಂದಿದ್ದ ಮಹಿಳಾ ಅಭ್ಯರ್ಥಿಯೊಬ್ಬರೊಂದಿಗೆ ರಾಜ್ಯಪಾಲರು ಅನುಚಿತವಾಗಿ ವರ್ತಿಸಿದ್ದರು ಹಾಗೂ ಆಕೆಯನ್ನು ತಬ್ಬಿಕೊಂಡು ಮುತ್ತಿಕ್ಕಿದ್ದರು ಎಂದು ಬರೆಯಲಾಗಿತ್ತು. ಆದರೆ ಈ ಆರೋಪವನ್ನು ರಾಜ್ಯಪಾಲರು ನಿರಾಕರಿಸಿದ್ದು ರಾಜ ಭವನದ ಎಲ್ಲಾ ಮಹಿಳಾ ಉದ್ಯೋಗಿಗಳು ತಮ್ಮ ‘ಪುತ್ರಿಯರು ಹಾಗೂ ಮೊಮ್ಮಕ್ಕಳಂತೆ’ ಎಂದಿದ್ದರು.
ತಾನು ಯಾರ ಜತೆಗೂ ಅನುಚಿತವಾಗಿ ವರ್ತಿಸಿಲ್ಲವೆಂದೂ ರಾಜ್ಯಪಾಲರು ಹೇಳಿದ್ದಾರೆಂದು ದಿ ಹೈಲ್ಯಾಂಡ್ ಪೋಸ್ಟ್ ವರದಿ ತಿಳಿಸಿದೆ.