ಸಂಕುಚಿತ ಭಾವನೆ ತೊರೆದು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸೋಣ: ರಮಾನಾಥ ರೈ
ಮಂಗಳೂರು, ಜ.26: ದೇಶದ ಏಕತೆ, ಒಗ್ಗಟ್ಟು, ಸೌಹಾರ್ದವನ್ನು ಉಳಿಸಿಕೊಳ್ಳಲು ಜಾತಿ, ಭಾಷೆ, ಪಂಗಡಗಳ ಸಂಕುಚಿತ ಭಾವನೆಗಳನ್ನು ತೊರೆದು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ದಿಕ್ಕಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು.
ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಗುರುವಾರ ಬೆಳಗ್ಗೆ ನಡೆದ 68ನೆ ಗಣರಾಜೋತ್ಸವದ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ಸಂದೇಶ ನೀಡಿದರು.
ನಾಗರಿಕರಾಗಿ ನಾವು ಈ ದೇಶದ ಭವ್ಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಸಮಾಜದ ಎಲ್ಲ ಬಡ ಜನರನ್ನು ಮುನ್ನೆಲೆಗೆ ತರುವುದರ ಜೊತೆಗೆ ದುಡಿಯುವ ಕೈಗಳಿಗೆ ಕೆಲಸ ನೀಡಿದಾಗ ಪ್ರಜಾಪ್ರಭುತ್ವದ ಫಲ ಜನರಿಗೆ ದೊರೆತಂತಾಗುತ್ತದೆ. ಬಹು ಸಂಸ್ಕೃತಿ, ಬಹುಭಾಷೆ, ಬಹುಜಾತಿ, ಮತಗಳ ನೆಲೆ ಬೀಡಾಗಿರುವ ದೇಶದಲ್ಲಿ ಈ ದಿನ ಗಣತಂತ್ರ ವ್ಯವಸ್ಥೆಯ ಹಬ್ಬ ಎಂದು ರೈ ಹೇಳಿದರು.
ದ.ಕ. ಜಿಲ್ಲೆಯಲ್ಲಿ ಕುಡಿಯುವ ನೀರಿನ 962 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 37 ಗ್ರಾಮಗಳನ್ನು ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆ ಮಾಡಲಾಗಿದೆ. 177.8 ಕೋಟಿ ವೆಚ್ಚದ ನಗರೋತ್ಥಾನ ಯೋಜನೆಯಡಿ 414 ಬೃಹತ್ ರಸ್ತೆಗಳ ಅಭಿವೃದ್ಧಿ, ಮಳೆ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ.ಎರಡನೆ ಹಂತದಲ್ಲಿ 31 ಕೋ.ರೂ. ಅನುದಾನದಲ್ಲಿ 53 ಬೃಹತ್ ಕಾಮಗಾರಿ ಕೈಗೊಳ್ಳಲಾಗಿದೆ ಎಂಗು ವಿವಿಧ ಅಭಿವೃದ್ಧಿ ಯೋಜನೆಗಳ ವಿವರ ನೀಡಿದರು.
ಸಾಧಕರಿಗೆ ಪ್ರಶಸ್ತಿ:
ಇದೇ ಸಂದರ್ಭ ಸಮಾಜ ಸೇವಕರಾದ ಚಾರ್ಮಾಡಿಯ ಹಸನಬ್ಬ, ಅಬ್ದುಲ್ ಗಪೂರ್ ಹಾಗೂ ಮನೋಹರರಿಗೆ ಜೀವರಕ್ಷಕ ಪ್ರಶ್ತಸಿ ನೀಡಿ ಗೌರವಿಸಲಾಯಿತು. ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ್ವರಿದೇವಿ, ಸಹಾಯಕ ಕಾರ್ಯಪಾಲ ಅಭಿಯಂತರ ಕೆ.ಪಿ.ಗಿರೀಶ್ ಗೌಡ, ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಬಶೀರ್, ಕ್ಷೇತ್ರ ಆರೋಗ್ಯ ಅಧಿಕಾರಿ ಅಮ್ಮಿ, ಇಡ್ಕಿದು ಗ್ರಾಪಂ ಕಾರ್ಯದರ್ಶಿ ಗೋಕುಲದಾಸ್ ಭಕ್ತ ಇವರಿಗೆ ಗಣರಾಜೋತ್ಸವದ ಉತ್ತಮ ಸಾಧಕ ಪ್ರಶಸ್ತಿ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2016-17ನೆ ಸಾಲಿನ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳನ್ನು ಸನ್ಮಾನಿಸಲಾಯಿತು.
ಜಿಲ್ಲಾ ಶಸಸ್ತ್ರ ಪೊಲೀಸ್ ಪಡೆ, ಸ್ಕೌಡ್, ಗೈಡ್ಸ್, ಭಾರತ ಸೇವಾ ದಳ, ಎನ್.ಸಿ.ಸಿ., ಅರಣ್ಯ ಪೊಲೀಸ್, ಗೃಹರಕ್ಷಕದಳ ಹಾಗೂ ಅಗ್ನಿಶಾಮಕ ದಳದವರಿಂದ ಆಕರ್ಷಕ ಕವಾಯತು ನಡೆಯಿತು.
ಕೊನೆಯಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು ನಡೆಯಿತು. ಇದೇ ಸಂದರ್ಭದಲ್ಲಿ ಮಂಗಳೂರು ಮೋಟಾರ್ಸ್ ಸ್ಪೋರ್ಟ್ಸ್ ಸಂಘದಿಂದ ಆಯೋಜಿತವಾಗಿದ್ದ ವಿಂಟೇಜ್ ಕಾರು ರ್ಯಾಲಿ ಪ್ರದರ್ಶನ ಕಾರುಪ್ರಿಯರನ್ನು ಸೆಳೆಯಿತು.
ಸಮಾರಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಬಿ.ಮೊಯ್ದಿನ್ ಬಾವ, ಐವನ್ ಡಿಸೋಜ, ಮೇಯರ್ ಹರಿನಾಥ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಗೌಡ, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಜಿಪಂ ಸಿಇಒ ಡಾ.ಎಂ.ಆರ್.ರವಿ, ಮಂಗಳೂರು ಪೊಲೀಸ್ ಕಮಿಷನರ್ ಚಂದ್ರ ಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಮೊದಲಾದವರು ಉಪಸ್ಥಿತರಿದ್ದರು.