ಕದ್ರಿ ಉದ್ಯಾನವನದಲ್ಲಿ ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Update: 2017-01-26 08:06 GMT

 ಮಂಗಳೂರು, ಜ.26: ದ.ಕ. ಜಿಲ್ಲಾ ಪಂಚಾಯತ್ , ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ಸಿರಿ ತೋಟಗಾರಿಕೆ ಸಂಘ ಇವುಗಳ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ಜ.29ರವರೆಗೆ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುರುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಲಾಭದಾಯಕವಾಗಿರುವ ತೋಟಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು. ಅರಣ್ಯ ಇಲಾಖೆಯಿಂದಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಅರಣ್ಯ ವನಗಳನ್ನು ಬೆಳೆಸುವುದು, ಫ್ರೀ ಪಾರ್ಕ್, ತೋಟಗಾರಿಕೆ ಸಸ್ಯಗಳ ಸಹಿತ ಔಷಧಿ ಸಸ್ಯ ಬೆಳೆಸಲು ಪ್ರೋತ್ಸಾಹ ನೀಡುವುದು ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿರು.

ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಮೇಯರ್ ಹರಿನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಕವಿತಾ ಸನಿಲ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೀಶ್ ಎಚ್.ಆರ್. ಮೊದಲಾದವರು ಉಪಸ್ಥಿತರಿದ್ದರು.

*ಗಮನಸೆಳೆಯುತ್ತಿರುವ ಹೂವಿನ ರಾಣಿ ಅಬ್ಬಕ್ಕಳ ಪ್ರತಿಕೃತಿ
ಪ್ರದರ್ಶನದಲ್ಲಿ ಈ ಬಾರಿ ಹೂವಿನಲ್ಲಿ ರಾಣಿ ಅಬ್ಬಕ್ಕನ ಪ್ರತಿಕೃತಿ ಪ್ರಮುಖ ಆಕರ್ಷಣೆ. ಅಬ್ಬಕ್ಕ ಹಾಗೂ ಕುದುರೆ ಸೇರಿ ಸುಮಾರು 10 ಅಡಿ ಎತ್ತರದ ಪ್ರತಿಕೃತಿ ರಚಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ನಿರ್ಮಿಸಿದ ಆನೆ, ಸೈನಿಕರು ಎಲ್ಲ ಸೇರಿ ಸುಮಾರು 9 ಅಡಿ ಉದ್ದ ಹಾಗೂ 4 ಅಡಿ ಅಗಲ ಜಾಗದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.

ವಿದ್ಯಾರ್ಥಿಗಳು, ಹಿರಿಯರಿಗೆ ಉಚಿತ ಪ್ರವೇಶ
ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ ರೂ.20/- ಮಕ್ಕಳಿಗೆ ರೂ.10/ ಪ್ರವೇಶ ಶುಲ್ಕ ವಿಧಿಸಲಾಗಿದೆ. ಅಧ್ಯಾಪಕರೊಂದಿಗೆ ಬರುವ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ನಾಲ್ಕು ದಿನವೂ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 80 ಮಳಿಗೆಗಳನ್ನು ತೆರೆಯಲಾಗಿದೆ. ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು ಮಳಿಗೆಗಗಳು, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ವೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಹಾಗೂ ಉದ್ದಿಮೆದಾರರಿಂದ ಸಾರ್ವಜನಿಕರು ಖರೀದಿಸಲು ಹಾಗೂ ವೀಕ್ಷಿಸಲು ಅವಕಾಶವಿದೆ.

ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಹೋಟೆಲ್ ಸಂಘದವರಿಂದ 25 ಮಳಿಗೆಗಳನ್ನು ತೆರೆಯಲಾಗಿದ್ದು, ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಪ್ರದರ್ಶನ ದಿನಗಳಲ್ಲಿ ಪ್ರತೀ ದಿನ ಸಂಜೆ ವೈವಿಧ್ಯಯ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News