ಕಾಶ್ಮೀರದಲ್ಲಿ ಜ.26ರಂದು ಸ್ಥಗಿತಗೊಳ್ಳದ ಮೊಬೈಲ್,ಇಂಟರ್ನೆಟ್
ಶ್ರೀನಗರ,.26: ಅಚ್ಚರಿಯೆಂಬಂತೆ ಗಣರಾಜ್ಯೋತ್ಸವ ದಿನವಾದ ಗುರುವಾರ ಕಾಶ್ಮೀರದಲ್ಲಿ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಜಾಲಗಳು ಸ್ಥಗಿತಗೊಂಡಿರಲಿಲ್ಲ. ಕಾಶ್ಮೀರದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನಾಚರಣೆಗಳ ಸಂದರ್ಭ ಭದ್ರತಾ ವ್ಯವಸ್ಥೆಯ ಅಂಗವಾಗಿ ಇವೆರಡೂ ಸೌಲಭ್ಯಗಳನ್ನು ಅಮಾನತುಗೊಳಿಸಲಾಗುತ್ತದೆ. ಇಂದು ಕಾಶ್ಮೀರದ ಮುಖ್ಯ ಸಮಾರಂಭ ತಾಣ ಬಕ್ಷಿ ಸ್ಟೇಡಿಯಂ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಗಣರಾಜ್ಯೋತ್ಸವ ಪರೇಡ್ ಆರಂಭಗೊಂಡರೂ ಮೊಬೈಲ್ ಫೋನ್ ಮತ್ತು ಅಂತರ್ಜಾಲ ಬಳಕೆಗೆ ಅವಕಾಶ ನೀಡಿದ್ದು ಇದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಕೇವಲ ಎರಡನೇ ಬಾರಿಯಾಗಿದೆ.
ರಾಜ್ಯದಲ್ಲಿ ಮೊಬೈಲ್ ಫೋನ್‌ಗಳು ಬಳಕೆಗೆ ಬಂದ ಬಳಿಕ 2015,ಜನವರಿ 26 ರಂದು ಮೊದಲ ಬಾರಿಗೆ ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತ ಗೊಳಿಸಲಾಗಿರಲಿಲ್ಲ.
2005ರಲ್ಲಿ ಸ್ವಾತಂತ್ರ ದಿನಾಚರಣೆ ಸಂದರ್ಭ ಉಗ್ರಗಾಮಿಗಳು ಬಕ್ಷಿ ಸ್ಟೇಡಿಯಂ ಹೊರಗೆ ಸ್ಫೋಟಗಳನ್ನು ನಡೆಸಿದ್ದರು. ಆಗಿನಿಂದಲೂ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ಅಂಗವಾಗಿ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿ ಸಲಾಗುತ್ತಿದೆ.
ಕಾಶ್ಮೀರ ಕಣಿವೆಯಲ್ಲಿ ತೊಂದರೆಗಳು ಉದ್ಭವಿಸಿದಾಗೆಲ್ಲ ಅಧಿಕಾರಿಗಳು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸುತ್ತಾರೆ.
ಕಳೆದ ವರ್ಷದ ಕಾಶ್ಮೀರ ಅಶಾಂತಿಯ ಸಂದರ್ಭದಲ್ಲಿ ಇವೆರಡೂ ಸೇವೆಗಳನ್ನು ಸುದೀರ್ಘ ಅವಧಿಗೆ ಸ್ಥಗಿತಗೊಳಿಸಲಾಗಿತ್ತು. ನ.18ರ ವೇಳೆಗೆ ಹೆಚ್ಚಿನೆಲ್ಲ ಸೇವೆಗಳು ಪುನರಾರಂಭಗೊಂಡಿದ್ದರೂ ಪ್ರಿಪೇಡ್ ಸಂಪರ್ಕಗಳಿಗೆ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಇನ್ನೂ ಪುನರಾರಂಭಿಸಿಲ್ಲ.