ಸಲ್ಫರ್ ಕೋಕ್ ಘಟಕ: ಹಸಿರು ವಲಯ ಸ್ಥಾಪಿಸಲು ಸಚಿವ ರಮಾನಾಥ ರೈ ಸೂಚನೆ
ಮಂಗಳೂರು, ಜ.26: ಎಂಆರ್‌ಪಿಎಲ್‌ನ ಸಲ್ಫರ್ ಕೋಕ್ ಘಟಕದಿಂದ ಬಾಧಿತವಾಗಿರುವ 27 ಎಕರೆ ಪ್ರದೇಶದಲ್ಲಿ ಹಸಿರು ವಲಯ ಸ್ಥಾಪಿಸಲು ಸಚಿವ ರಮಾನಾಥ ರೈ ಎಂಆರ್‌ಪಿಎಲ್ ಅಧಿಕಾರಿಗಳಿಗೆ ಸೂಚಿಸಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜನಪ್ರತಿನಿಧಿಗಳು, ಜಿಲ್ಲಾಡಳಿತ, ಕಂಪೆನಿಯು ಜನಸಾಮಾನ್ಯರ ಸಂಶಯ ನಿವಾರಣೆ ಮಾಡಿಕೊಡುವಂತಹ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ಎಂಆರ್‌ಪಿಎಲ್ ಅಧಿಕಾರಿ ಮಾತನಾಡಿ, ಸರಕಾರದಿಂದ 9 ನಿರ್ದೇಶನಗಳು ಬಂದಿವೆ. ಸಂತ್ರಸ್ಥ ಕುಂಟುಂಬಗಳಿಗೆ ಕೆಲಸವನ್ನು ಕೊಡಲಾಗುವುದು ಎಂದರು.
ಇದಕ್ಕೆ ಸಚಿವ ರೈ ಪ್ರತಿಕ್ರಿಯಿಸಿ, ಎಂಆರ್‌ಪಿಎಲ್ ಕಂಪೆನಿ ಎಂದರೆ ಇದು ಖಾಸಗಿ ಕಂಪೆನಿಯಲ್ಲ. ಸರಕಾರಿ ಸ್ವಾಮ್ಯದ ಕಂಪೆನಿಯಾಗಿದ್ದರೂ ಪರಿಸರ ಸಂರಕ್ಷಣೆ ವಿಚಾರ ಬಂದಾಗ ಜನಪರವಾಗಿರಬೇಕು. ಪರಿಸರ ಸಂರಕ್ಷಣೆಗೆ ಪೂರಕವಾದ ಯೋಜನೆಗಳನ್ನು ರೂಪಿಸಿ. ಸಲ್ಫರ್ ಕೋಕ್ ಘಟಕದಿಂದ ಬಾಧಿತವಾದ 27 ಎಕರೆ ಪ್ರದೇಶಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮೂಲ ಉದ್ದೇಶವಾಗಿದೆ ಎಂದರು.
ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಮಾತನಾಡಿ, ಈ 27 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸರಕಾರ ತಿಳಿಸಿದೆ. ಬಾಧಿತ ಪ್ರದೇಶದಲ್ಲಿ ಫ್ಲೈಓವರ್ ಕಟ್ಟಿಸಿದ ಮೇಲೆ ಕೆಲಸಗಳು ಪ್ರಾರಂಭವಾಗುತ್ತವೆ. ಆ ಫೈ ಓವರ್ ಮೇಲೆ ಓಡಾಡುವ ವಾಹನಗಳಿಂದ ಅಲ್ಲಿನ ಜನರಿಗೆ ಬೇರೆ ಬೇರೆ ರೀತಿಯ ಪರಿಣಾಮಗಳು ಉಂಟಾಗುತ್ತವೆ. ಅಲ್ಲಿನ ಸ್ಪಲ್ಪ ಜನರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಿ ಅವರಿಗೂ ರಕ್ಷಣೆ ನೀಡಬಹುದಾಗಿದೆ. ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಎಂಆರ್‌ಪಿಎಲ್ ಸಂಘಟನೆಯ ಹೋರಾಟಕ್ಕೆ ಸಂದಿಸಿದೆ. ಆದರೆ ಬೇಡಿಕೆಗಳು ಶಾಶ್ವತವಾಗಿ ಪರಿಹಾರವಾಗಬೇಕು ಎಂದರು.
ಜನರ ಸಮಸ್ಯೆ ಇತ್ಯರ್ಥ ಪಡಿಸಬೇಕೆಂಬುದು ನಮ್ಮ ಹೋರಾಟವಾಗಿದೆ. ಬಾಧಿತ ಪ್ರದೇಶದ ಮಾಲಿನ್ಯ ಸಮಸ್ಯೆ ಪರಿಹಾರವಾಗುವ ನಿಟ್ಟಿನಲ್ಲಿ ಒತ್ತಾಯ ಮಾಡಲಾಗಿತ್ತು. ಉದ್ದಕ್ಕೆ ಹಸಿರು ವಲಯ ಸ್ಥಾಪಿಸುವುದಕ್ಕಿಂತ ಬಾಧಿತ ಪ್ರದೇಶದ ಜನರನ್ನು ಸ್ಥಳಾಂತರ ಮಾಡಿ, ಮರ ನೆಟ್ಟರೆ ಪರಿಣಾಮ ಬೀರಲಿದೆ. ಹಿಂದಿನ ರೀತಿಯಲ್ಲಿ ಕೊಡುವ ಹಾಗೆಯೇ ಪರಿಹಾರ ನೀಡಬೇಕು. ಉದ್ಯೋಗ ಕೊಡದಿದ್ದರೆ ಅದಕ್ಕೆ ಸಮಾನ ಪರ್ಯಾಯ ಪರಿಹಾರ ನೀಡಲಿ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.
ಎಂಆರ್‌ಪಿಎಲ್ ಅಧಿಕಾರಿ ಮಾತನಾಡಿ, ಸಿಎಸ್‌ಆರ್‌ನ 10 ಕೋರಿಕೆಗಳು ಬಂದಿದ್ದು, ಅದರಲ್ಲಿ ಎರಡನ್ನು ಸ್ವೀಕರಿಸಲಾಗಿದೆ. ಜೋಕಟ್ಟೆಯ ಶಾಲೆಗೆ ತಡೆಗೋಡೆ, ರಸ್ತೆ ನಿರ್ಮಿಸಿ ಕೊಡಲಾಗುವುದು ಎಂದರು.
ಜೋಕಟ್ಟೆ ಗ್ರಾಪಂನ ಶಂಸುದ್ದೀನ್ ಮಾತನಾಡಿ, ಜೋಕಟ್ಟೆಗೆ ಆರೋಗ್ಯ ಕೇಂದ್ರದ ಅಗತ್ಯವಿದೆ. ಆ್ಯಂಬುಲೆನ್ಸ್ ಸೇವೆಯನ್ನು ನೀಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಜಿ.. ಜಗದೀಶ್, ಶಾಸಕರಾದ ಅಭಯ್‌ಚಂದ್ರ ಜೈನ್, ಮೊಯ್ದಿನ್ ಬಾವ, ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್.ಕುಮಾರ್, ಜಿಪಂ ಸಿಇಒ ಡಾ. ಎಂ.ಆರ್. ರವಿ, ಶುದ್ಧೀಕರಣ ಘಟಕದ ನಿರ್ದೇಶಕ ವೆಂಕಟೇಶ್, ಜೋಕಟ್ಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.