ಕಂಬಳ ಹೋರಾಟಕ್ಕೆ ತುಳು ಕಲಾವಿದರ ಬೆಂಬಲ
ಮಂಗಳೂರು, ಜ.26: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಬೆಂಬಲಿಸಿ ಜ.27ರಂದು ಮಂಗಳೂರಿನಲ್ಲಿ ನಡೆಯುವ ಮಾನವ ಸರಪಳಿ ಹಾಗೂ ಜಿಲ್ಲಾ ಕಂಬಳ ಸಮಿತಿ ವತಿಯಿಂದ ಡಿ.28ರಂದು ಮೂಡುಬಿದಿರೆಯಲ್ಲಿ ನಡೆಯುವ ಕಂಬಳ ಪರ ಹೋರಾಟಕ್ಕೆ ಜಿಲ್ಲೆಯ ತುಳು ಕಲಾವಿದರು ಬೆಂಬಲಿಸಲಿದ್ದಾರೆ ಎಂದು ಕಲಾವಿದರಾದ ದೇವದಾಸ ಕಾಪಿಕಾಡ್ ಮತ್ತು ವಿಜಯ ಕುಮಾರ್ ಕೋಡಿಯಾಲ್‌ಬೈಲ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿನೆಮಾ, ರಂಗಭೂಮಿ, ಯಕ್ಷಗಾನ, ಜಾದೂ, ಭರತನಾಟ್ಯ ಹೀಗೆ ಸಾಂಸ್ಕೃತಿಕ ರಂಗದ ಎಲ್ಲವೂ ಕಂಬಳಕ್ಕೆ ಪ್ರಾಧ್ಯಾನತೆ ನೀಡುತ್ತಿದೆ. ಕರಾವಳಿಯ ಸಂಸ್ಕೃತಿ ಉಳಿಸಬೇಕಾದರೆ ಕಂಬಳವನ್ನು ಮುನ್ನಡೆಸಬೇಕು. ಈ ವಿಚಾರದಲ್ಲಿ ಎಲ್ಲ ಕಲಾವಿದರು ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕ ಕದ್ರಿ ನವನೀತ್ ಶೆಟ್ಟಿ, ಸುಂದರ ರೈ ಮಂದಾರ, ಭೋಜರಾಜ ವಾಮಂಜೂರು, ಕುದ್ರೋಳಿ ಗಣೇಶ್, ಚಂದ್ರಶೇಖರ, ಧನರಾಜ್, ಅಶೋಕ್ ಶೆಟ್ಟಿ ಸರಪಾಡಿ ಮತ್ತಿತರರು ಉಪಸ್ಥಿತರಿದ್ದರು.