ಹಿಂಸೆಯಿಂದ ಕೆಲಸವಾಗುತ್ತದೆ: ಟ್ರಂಪ್!
ವಾಶಿಂಗ್ಟನ್, ಜ. 26: ಹಿಂಸೆಯೆಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ಹಾಗೂ ಕಾನೂನು ಮೂಲಕ ನಿಷೇಧಿಸಲಾಗಿರುವ ವಾಟರ್‌ಬೋರ್ಡಿಂಗ್ ಮತ್ತು ಇತರ ತನಿಖಾ ವಿಧಾನಗಳು ‘ಪರಿಪೂರ್ಣವಾಗಿ’ ಕೆಲಸ ಮಾಡುತ್ತವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
ಆದಾಗ್ಯೂ, ಆ ತನಿಖಾ ವಿಧಾನಗಳನ್ನು ಮತ್ತೆ ಜಾರಿಗೊಳಿಸಬೇಕೇ ಎನ್ನುವ ಕುರಿತ ನಿರ್ಧಾರ ತೆಗೆದುಕೊಳ್ಳುವುದನ್ನು ಸಿಐಎ ಮತ್ತು ಪೆಂಟಗನ್ ಮುಖ್ಯಸ್ಥರಿಗೆ ಬಿಡುವುದಾಗಿ ಅವರು ಹೇಳಿದ್ದಾರೆ.
ಶ್ವೇತಭವನದಲ್ಲಿ ‘ಎಬಿಸಿ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ, ವಾಟರ್‌ಬೋರ್ಡಿಂಗ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್, ಐಸಿಸ್ ಭಯೋತ್ಪಾದಕರು ಅಮೆರಿಕನ್ನರ ತಲೆ ಕಡಿಯುತ್ತಿರುವ ಹಾಗೂ ಇತರ ದೌರ್ಜನ್ಯಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ‘ಬೆಂಕಿಯೊಂದಿಗೆ ಬೆಂಕಿ ಮೂಲಕವೇ ಹೋರಾಟ ನಡೆಸುವುದು’ ಅಗತ್ಯವಾಗಿದೆ ಎಂದರು.
ವಿದೇಶಗಳಲ್ಲಿರುವ ಸಿಐಎಯ ರಹಸ್ಯ ‘ಬ್ಲಾಕ್ ಸೈಟ್’ ಕಾರಾಗೃಹಗಳಿಗೆ ಮತ್ತೆ ಚಾಲನೆ ನೀಡಲು ಟ್ರಂಪ್ ಆಡಳಿತ ಪರಿಶೀಲನೆ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ.
ತನ್ನ ಚುನಾವಣಾ ಪ್ರಚಾರದ ಅವಧಿಯಲ್ಲಿ ಟ್ರಂಪ್ ಇದಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು.