ಸಿಪಿಎಂನಿಂದ ಗಣರಾಜ್ಯ ಉಳಿಸಿ ಧರಣಿ ಸತ್ಯಾಗ್ರಹ
ಮಂಗಳೂರು, ಜ.26: ಸ್ವತಂತ್ರಗೊಂಡ ಭಾರತ ದೇಶವನ್ನು ಪ್ರಜಾಪ್ರಭುತ್ವ ತತ್ತ್ವದಲ್ಲಿ ಆಳ್ವಿಕೆ ಮಾಡುವ ಸಂವಿಧಾನವನ್ನು 67 ವರ್ಷಗಳ ಹಿಂದೆ ಅಂಗೀಕರಿಸಿದ್ದೇವೆ. ಆದರೆ ಕಳೆದ ಎರಡೂವರೆ ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುವ ನರೇಂದ್ರ ಮೋದಿ ನೇತೃತ್ವದ ಸರಕಾರ ಸಂವಿಧಾನದ ಆಶಯಗಳನ್ನೇ ಕಡೆಗಣಿಸಿ ಕೋಮುವಾದಿ ಹಾಗೂ ಸರ್ವಾಧಿಕಾರಿ ರೀತಿಯ ಆಡಳಿತ ನಡೆಸುತ್ತಿದೆ. ಆದುದರಿಂದ ಗಣರಾಜ್ಯವನ್ನು ಉಳಿಸಿ, ಪ್ರಜಾಪ್ರಭುತ್ವವನ್ನು ಬೆಳೆಸಬೇಕಾಗಿದೆ ಎಂದು ಸಿಪಿಎಂ ಪಕ್ಷದ ಹಿರಿಯ ಮುಖಂಡ ಕೆ.ಆರ್. ಶ್ರೀಯಾನ್ ಹೇಳಿದರು.
ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಪಿಎಂ ಪಕ್ಷ ಏರ್ಪಡಿಸಿದ್ದ ಗಣರಾಜ್ಯ ಉಳಿಸಿ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಿನ್ನ ರೀತಿಯ ಜನಪರ ಆಡಳಿತ ಮಾಡುತ್ತೇವೆ ಎಂದು ಹೇಳಿ ಮೋದಿ ಆಡಳಿತಕ್ಕೆ ಬಂದಿದ್ದರು. ಆದರೆ ಎರಡೂವರೆ ವರ್ಷಗಳ ಅವಧಿಯಲ್ಲಿ ಹಿಂದೂ ಮತೀಯರ ಪರವಾದ ನಿಲುವುಗಳನ್ನು ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ ಸರ್ವಾಧಿಕಾರಿ ನೆಲೆಯಲ್ಲಿ ಏಕಪಕ್ಷೀಯವಾಗಿ ಮೋದಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ದಲಿತರ ಮೇಲೆ, ಅಲ್ಪಸಂಖ್ಯಾತರ ಮೇಲೆ, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಕಮ್ಯೂನಿಸ್ಟರ ಮೇಲೆ, ಬುದ್ಧಿಜೀವಿಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಕೆ.ಆರ್.ಶ್ರೀಯಾನ್ ಹೇಳಿದರು.
ಗೋಮಾಂಸ ಸೇವನೆ ಆಕ್ಷೇಪ ವ್ಯಕ್ತಪಡಿಸಿ, ಅಲ್ಪಸಂಖ್ಯಾತರ ಆಹಾರ ಹಕ್ಕುಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ದಾದ್ರಿ ಎಂಬಲ್ಲಿ ಮಹಮ್ಮದ್ ಅಬ್ಲಾಕ್ ಎಂಬವರನ್ನು ಗೋಮಾಂಸ ಶೇಖರಿಸಿಟ್ಟರು ಎಂದು ಆರೋಪಿಸಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮೋದಿಯವರ ಸ್ವಂತ ರಾಜ್ಯ ಗುಜರಾಥಿನ ಊನಾ ಎಂಬ ಗ್ರಾಮದಲ್ಲಿ ದನದ ಚರ್ಮ ಸುಲಿದರು ಎಂಬ ಕಾರಣ ಹೇಳಿ ನಾಲ್ವರು ದಲಿತರ ಮೇಲೆ ಸಾರ್ವಜನಿಕವಾಗಿ, ಹೀನಾಯವಾಗಿ ಹಿಂಸೆ ಮಾಡಲಾಗಿದೆ. ಹೈದರಾಬಾದ್ ಕೇಂದ್ರೀಯ ವಿಶ್ವ ವಿದ್ಯಾನಿಲಯದಲ್ಲಿ ಪ್ರತಿಭಾವಂತ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರನ್ನು ಆತ್ಮಹತ್ಯೆಗೆ ದೂಡಲಾಗಿದೆ ಎಂದು ಹೇಳಿದರು.
ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಮುಖಂಡರಾದ ಯಾದವ ಶೆಟ್ಟಿ, ವಾಸುದೇವ ಉಚ್ಚಿಲ, ಕೃಷ್ಣಪ್ಪಕೊಂಚಾಡಿ ಮಾತನಾಡಿದರು.
ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಪ್ರಾಸ್ತಾವಿಸಿದರು. ಪಕ್ಷದ ಜಿಲ್ಲಾ ಮುಖಂಡರಾದ ಯು.ಬಿ. ಲೋಕಯ್ಯ, ಕೃಷ್ಣಪ್ಪಸಾಲ್ಯಾನ್, ಸುನೀಲ್ ಕುಮಾರ್ ಬಜಾಲ್ ಪಾಲ್ಗೊಂಡಿದ್ದರು.