×
Ad

ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ : ಕೋಟ ವಿವೇಕ ಪಿಯು ಕಾಲೇಜಿನ ಸ್ವಸ್ತಿಕ್ ಭಂಡಾರಿ ಅಧ್ಯಕ್ಷ

Update: 2017-01-26 21:18 IST

ಬ್ರಹ್ಮಾವರ, ಜ.26: ಬಾರಕೂರಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀರಾಮಕೃಷ್ಣ ಆಶ್ರಮ ಬೆಳಗಾವಿ ಮತ್ತು ಮಂಗಳೂರು ಹಾಗೂ ಬಾರಕೂರು ಆನ್‌ಲೈನ್ ಡಾಟ್‌ಕಾಮ್ ಇವುಗಳ ಸಹಯೋಗದಲ್ಲಿ 16ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಇದೇ ಜ.28ರ ಶನಿವಾರ ಬಾರಕೂರಿನ ಸಂಕಮ್ಮ ತಾಯಿ ರೆಸಾರ್ಟ್ ಸಭಾಭವನದಲ್ಲಿ ನಡೆಯಲಿದೆ.

ಸ್ವಾಮಿ ವಿವೇಕಾನಂದರ 155ನೇ ಜಯಂತಿ ಪ್ರಯುಕ್ತ ನಡೆಯುವ ಈ ಒಂದು ದಿನದ ಸಮ್ಮೇಳನವನ್ನು ಕಾಂತಾವರದ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಸ್ವಸ್ತಿಕ್ ಭಂಡಾರಿ ಆಯ್ಕೆಯಾಗಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷರೂ ರಂಗನಟ-ನಿರ್ದೇಶಕರೂ ಆಗಿರುವ ಆಲ್ವಿನ್ ಆಂದ್ರಾದೆ ಮಕ್ಕಳ ಸ್ವರಚಿತ ಕವನಸಂಕಲನವನ್ನು ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಕಸಾಪದ ಮಾಜಿ ಕೋಶಾಧಿಕಾರಿ ಭುವನಪ್ರಸಾದ್ ಹೆಗ್ಡೆ ಶುಭಾಶಂಸನೆಗೈಯಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಬ್ರಹ್ಮಾವರ ವಲಯದ ತಾಲೂಕು ದೈಹಿಕ ಶಿಕ್ಷಣ ಪರಿ ವೀಕ್ಷಣಾಧಿಕಾರಿ ಭುಜಂಗ ಶೆಟ್ಟಿ ಉಪಸ್ಥಿತರಿರುವರು.

ಬಿ.ಸೀತಾರಾಮ ತೋಳ್ಪಾಡಿತ್ತಾಯ, ಯೋಗ ನಿರ್ದೇಶಕ ಐ.ಶಶಿಕಾಂತ್ ಜೈನ್, ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಸಂತ ಶೆಟ್ಟಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕರಿಷ್ಮಾ ಎಸ್. ಸನಿಲ್‌ರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು.
 
ಮಂಗಳೂರು ಮೂಲದ ರಾಷ್ಟ್ರೀಯ ಖ್ಯಾತಿಯ ಪರಿಣತ ಪ್ರಶಿಕ್ಷಕ ಡಾ. ಶಿಕಾರಿಪುರ ಕೃಷ್ಣಮೂರ್ತಿ ‘ಗೆಲುವಿನ ಗುಟ್ಟು’ ವಿಚಾರವಾಗಿ ಗೋಷ್ಟಿಯನ್ನು ನಡೆಸಿಕೊಡಲಿದ್ದಾರೆ.

ಮಕ್ಕಳ ಸ್ವರಚಿತ ಕವನವಾಚನ ಗೋಷ್ಠಿಯೂ ನಡೆಯಲಿದೆ. ಕವನವಾಚನ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಎಸ್.ನಿತ್ಯಾನಂದ ಪಡ್ರೆ ಸಮನ್ವಯಕಾರರಾಗಿರುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರೋಪ ಭಾಷಣ ಮಾಡಲಿದ್ದಾರೆ.

ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ಸಮ್ಮೇಳನದಲ್ಲಿ ಅವಕಾಶವನ್ನು ನೀಡಲಾಗಿದೆ. ಜಿಲ್ಲೆಯ ಪ್ರೌಢಶಾಲೆಗಳಿಂದ ಸುಮಾರು 400 ಮಂದಿ ಸಾಹಿತ್ಯಾಸಕ್ತ ಮಕ್ಕಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News