ಉಪ್ಪಿನಂಗಡಿ: ಚಿನ್ನಾಭರಣಗಳಿದ್ದ ಬ್ಯಾಗ್ ರಿಕ್ಷಾದಲ್ಲೇ ಬಿಟ್ಟ ಪ್ರಕರಣ ಸುಖಾಂತ್ಯ
ಉಪ್ಪಿನಂಗಡಿ, ಜ.26: ಕುಟುಂಬವೊಂದು ಚಿನ್ನಾಭರಣಗಳ ಬ್ಯಾಗನ್ನು ರಿಕ್ಷಾದಲ್ಲೇ ಬಿಟ್ಟು ಕೆಲಕಾಲ ಅತಂತ್ರ ಸ್ಥಿತಿಯಲ್ಲಿ ಪರದಾಡಿದ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ನಡೆದಿದೆ. ಬಳಿಕ ಪೊಲೀಸರ ಸಹಾಯದಿಂದ ರಿಕ್ಷಾವನ್ನು ಪತ್ತೆ ಹಚ್ಚಿ ಬ್ಯಾಗ್ ಹಸ್ತಾಂತರಿಸಲಾಯಿತು.
ಗುಂಡ್ಯದ ಅಡ್ಡಹೊಳೆ ನಿವಾಸಿಯಾಗಿರುವ ಗುಡ್ಡಪ್ಪ ಗೌಡ, ಅವರ ಮಗಳು ಮತ್ತು ಮೂವರು ಮಕ್ಕಳೊಂದಿಗೆ ಕಾರ್ಯನಿಮಿತ್ತ ಪುತ್ತೂರಿನ ಕೆಮ್ಮಾಯಿ ಎಂಬಲ್ಲಿಗೆ ಬಂದಿದ್ದು, ಮನೆಗೆ ಹಿಂದಿರುಗಲು ಉಪ್ಪಿನಂಗಡಿಗೆ ಆಟೊ ರಿಕ್ಷಾವೊಂದರಲ್ಲಿ ಬಂದಿಳಿದಿದ್ದರು. ರಿಕ್ಷಾದಿಂದ ಇಳಿದ ಬಳಿಕ ಗುಂಡ್ಯದತ್ತ ಪ್ರಯಾಣಿಸಲು ಮುಂದಾಗುತ್ತಿದ್ದಂತೆಯೇ ಚಿನ್ನಾಭರಣದ ಬ್ಯಾಗ್ ರಿಕ್ಷಾದಲ್ಲೇ ಬಾಕಿಯಾದುದು ತಿಳಿದುಬಂದಿದೆ.
ಅಷ್ಟರಲ್ಲಾಗಲೇ ಆಟೊ ರಿಕ್ಷಾ ತೆರಳಿದ್ದರಿಂದ ಕಂಗೆಟ್ಟು ಈ ಕುಟುಂಬ ಅಸಹಾಯಕತೆಯಿಂದ ಸಹಾಯಕ್ಕಾಗಿ ಮೊರೆಯಿಟ್ಟಿದ್ದು, ಬಳಿಕ ಸ್ಥಳೀಯರ ಸೂಚನೆ ಮೇರೆಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ಲಭಿಸಿದಾಕ್ಷಣವೇ ತ್ವರಿತ ಕಾರ್ಯಾಚರಣೆಗೆ ಇಳಿದ ಪೊಲೀಸರು ಉಪ್ಪಿನಂಗಡಿ ಪರಿಸರದ ಸುತ್ತಮುತ್ತಲ ಎಲ್ಲಾ ಆಟೊ ರಿಕ್ಷಾಗಳನ್ನು ಪರಿಶೀಲನೆಗೆ ಒಳಪಡಿಸಿದರು.
ಉಪ್ಪಿನಂಗಡಿಯಿಂದ ಹೊರ ಹೋದ ಆಟೊ ರಿಕ್ಷಾಗಳ ಪತ್ತೆ ಕಷ್ಟ ಸಾಧ್ಯವಾಗಿದ್ದು, ತಾವು ಪ್ರಯಾಣಿಸಿದ ಆಟೊ ರಿಕ್ಷಾದ ಸಂಖ್ಯೆಯನ್ನೂ ದಾಖಲಿಸಿಕೊಳ್ಳದ ಕಾರಣ ನಿಖರವಾಗಿ ಆಟೊ ರಿಕ್ಷಾವನ್ನು ಪತ್ತೆ ಹಚ್ಚುವುದು ಸಮಸ್ಯೆಯಾಯಿತು ಎನ್ನಲಾಗಿದೆ. ಆದರೆ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ಆಟೊ ರಿಕ್ಷಾ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಲ್ಪಟ್ಟ ನಝೀರ್ ಎಂಬವರ ಆಟೊ ರಿಕ್ಷಾದ ಗುರುತು ಪತ್ತೆ ಹಚ್ಚಿದ ಗುಡ್ಡಪ್ಪ ಗೌಡರ ಮಗಳು, ಆಟೊ ರಿಕ್ಷಾದಲ್ಲಿ ನೋಡಿದಾಗ ಅದರ ಹಿಂಭಾಗದ ಸ್ಥಳದಲ್ಲಿ ಅವರಿಟ್ಟ ಸ್ಥಿತಿಯಲ್ಲಿಯೇ ಚಿನ್ನಾಭರಣದ ಬ್ಯಾಗ್ ಇರುವುದು ಪತ್ತೆಯಾಗಿದೆ.
ಇಳಿಯುವ ಅವಸರದಲ್ಲಿ ಆ ಕುಟುಂಬ ಬ್ಯಾಗ್ ಅನ್ನು ರಿಕ್ಷಾದಲ್ಲಿಯೇ ಮರೆತ್ತಿದ್ದು, ರಿಕ್ಷಾ ಚಾಲಕನಿಗೂ ತನ್ನ ರಿಕ್ಷಾದಲ್ಲಿ ಬ್ಯಾಗ್ ಇರುವುದು ತಿಳಿದಿರಲಿಲ್ಲ. ಕೊನೆಗೆ ಚಿನ್ನಾಭರಣದ ಬ್ಯಾಗ್ ಮರಳಿ ವಾರೀಸುದಾರರ ಕೈಸೇರುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿತು.