ಕೇಜ್ರಿ ಪ್ರಕಾರ ಪ್ರಧಾನಿ ಮೋದಿಗೆ ಭಾರತ ರತ್ನ ನೀಡಬೇಕು !

Update: 2017-01-26 17:03 GMT

ಹೊಸದಿಲ್ಲಿ, ಜ. 26 : ದಿಲ್ಲಿ ಮುಖ್ಯಮಂತ್ರಿ , ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ! ಅರೆ, ಇದೇನಿದು, ಇದ್ದಕ್ಕಿದ್ದಂತೆ ರಾಜಕೀಯದಲ್ಲಿ ಬದ್ಧ ವೈರಿಯೇ  ಪ್ರಧಾನಿಗೆ ದೇಶದ ಅತ್ಯುನ್ನತ ಗೌರವ ನೀಡಬೇಕು ಎಂದು ಹೇಳುತ್ತಿದ್ದಾರೆ ಎಂದು ನೀವು ಅಚ್ಚರಿ ಪಡುವ ಮೊದಲು ಇದಕ್ಕೆ ಕೇಜ್ರಿವಾಲ್ ನೀಡಿರುವ ಕಾರಣ ನೋಡಿ. 

ಗಣರಾಜ್ಯೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರ 120 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪೈಕಿ ಮಾಜಿ ಕೇಂದ್ರ ಸಚಿವ ಮರಾಠ ನಾಯಕ ಶರದ್ ಪವಾರ್ ಅವರ ಹೆಸರು ದೇಶದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ವಿಭೂಷಣದ ಪಡೆಯುವವರ ಪಟ್ಟಿಯಲ್ಲಿದೆ. ಇದು ಸಹಜವಾಗಿ ಹಲವರ ಹುಬ್ಬೇರಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಭ್ರಷ್ಟಾಚಾರ , ಕಪ್ಪು ಹಣ ಹಾಗು ಕುಟುಂಬ ರಾಜಕಾರಣದ ಆರೋಪ ಹೊತ್ತ ಪವಾರ್ ಗೆ ಅತ್ಯುನ್ನತ ಪ್ರಶಸ್ತಿ ನೀಡಿರುವುದು ಸರಿಯಲ್ಲ ಎಂದು ಅನಿಸಿಕೆಗಳು ವ್ಯಕ್ತವಾಗುತ್ತಿವೆ. 

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ , " ಶರದ್ ಪವಾರ್ ಅವರಿಗೆ ಪದ್ಮ ವಿಭೂಷಣ ನೀಡುವ ಧೈರ್ಯ ತೋರಿಸಿದ್ದಕ್ಕೆ ಮೋದಿಯವರಿಗೆ ಭಾರತ ರತ್ನ ನೀಡಬೇಕು" ಎಂದು ವ್ಯಂಗ್ಯವಾಡಿದ್ದಾರೆ.  ಇಷ್ಟಕ್ಕೇ ನಿಲ್ಲದ ಕೇಜ್ರಿ, ಪದ್ಮ ಪ್ರಶಸ್ತಿಗೆ ಮಾನದಂಡ ಏನು ಎಂದು ತಿಳಿಯಲು 1993ರ ವೋಹ್ರಾ ಸಮಿತಿಯ ವರದಿ ( ಕ್ರಿಮಿನಲ್ ಗಳು, ರಾಜಕಾರಣಿಗಳು ಹಾಗು ಅಧಿಕಾರಿಗಳ ನಡುವಿನ ಮೈತ್ರಿ ಕುರಿತ ವರದಿ) ಓದಬೇಕು ಎಂದೂ ಹೇಳಿದ್ದಾರೆ. 

ಗಣರಾಜ್ಯೋತ್ಸವ ಹಿಂದಿನ ದಿನ ಪ್ರಧಾನಿ ಮೋದಿ ಸಿಬಿಐ ಮೂಲಕ ದಿಲ್ಲಿ ಸರ್ಕಾರದ ಫೀಡ್ ಬ್ಯಾಕ್ ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿರುವ ಕೇಜ್ರಿ , ಈ ಸಂದರ್ಭದಲ್ಲಿ  ಜನತೆ ದೇಶವನ್ನು ಹಿಟ್ಲರ್ ಮಾದರಿಯ ಸರ್ವಾಧಿಕಾರಿಗಳಿಂದ ರಕ್ಷಿಸಲು ಮುಂದೆ ಬರಬೇಕು ಎಂದು ಪ್ರಧಾನಿ ವಿರುದ್ಧ ಪರೋಕ್ಷ ದಾಳಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News