×
Ad

‘ನಿರ್ಮಲ ಭಾರತ’ ಬೇಡದವರಿಗೆ ‘ಸ್ವಚ್ಛ ಭಾರತ’ ಬೇಕು!

Update: 2017-01-27 00:34 IST

ಮಾನ್ಯರೆ,
ಇತ್ತೀಚೆಗೆ ಮಠಾಧೀಶರಿಗೆ, ಧರ್ಮದರ್ಶಿಗಳಿಗೆ, ರೋಟರಿ- ಲಯನ್ಸ್ ಕ್ಲಬ್‌ನವರಿಗೆ, ಶಾಲಾ-ಕಾಲೇಜಿನವರಿಗೆ, ಸ್ವಚ್ಛತೆಯ ಬಗ್ಗೆ ಭಯಂಕರ ಕಾಳಜಿ ಶುರುವಾಗಿದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೆ ಹಿಂದಿನ ಯುಪಿಎ ಸರಕಾರ ಇದ್ದಾಗಲೇ ‘ನಿರ್ಮಲ್ ಭಾರತ್’ ಎಂಬ ಸ್ವಚ್ಛತಾ ಅಭಿಯಾನ ಶುರುವಾಗಿತ್ತು. ಅದನ್ನೇ ಬಿಜೆಪಿ ಸರಕಾರ ಕೇವಲ ಹೆಸರು ಮಾತ್ರ ಬದಲಾಯಿಸಿ ‘ಸ್ವಚ್ಛ ಭಾರತ್’ ಮಾಡಿ ಜಾಹೀರಾತು ಭರಾಟೆ ಹೆಚ್ಚಿಸಿತು ಅಷ್ಟೇ. ಇದೇನೂ ಹೊಸ ಯೋಜನೆ ಅಲ್ಲ. ಯುಪಿಎ ಸರಕಾರ ಇದ್ದಾಗ ದೇವಳಗಳ ಧರ್ಮದರ್ಶಿ-ಮಠಾಧೀಶರಿಗೆ, ರೋಟರಿ-ಲಯನ್ಸ್ ಕ್ಲಬ್‌ನವರಿಗೆ ನಿರ್ಮಲ್ ಭಾರತ್ ಯೋಜನೆ ಅಡಿ ಸ್ವಚ್ಛತೆಯ ಬಗ್ಗೆ ಅಷ್ಟು ಕಾಳಜಿ ಹುಟ್ಟುತ್ತಿರಲಿಲ್ಲ. ಆದರೆ ಈಗ ಬಿಜೆಪಿ ಸರಕಾರ ಬಂದ ಕೂಡಲೇ ಒಮ್ಮೆಲೇ ಅವರಿಗೆ ಸ್ವಚ್ಛತೆಯ ಕಾಳಜಿ ಉಮ್ಮಳಿಸಿ ಬರುತ್ತಿದೆಯಂತೆ. ಅಂದರೆ ನಮ್ಮ ಪರಿಸರ ಸ್ವಚ್ಛವಾಗಿರಬೇಕೋ ಅಥವಾ ಕೊಳಕಾಗಿರಬೇಕೋ ಎಂಬ ನಿರ್ಧಾರವನ್ನು ನಾವು ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷವನ್ನು ಆಧರಿಸಿ ಮಾಡುವುದೋ ಅಥವಾ ನಮ್ಮ ನೈಜ ಪರಿಸರ ಪ್ರೇಮದ ಆಧಾರದಲ್ಲಿ ಮಾಡುವುದೋ? ಈಗೀಗ ನಿಜವಾದ ಸ್ವಚ್ಛತೆಗಿಂತ ಪ್ರಚಾರದ ಅಬ್ಬರವೇ ಹೆಚ್ಚು. ಕೈಯಲ್ಲಿ ಪೊರಕೆ ಹಿಡಿದು ಸೆಲ್ಫೀ ತೆಗೆದು ಎಲ್ಲೆಲ್ಲೂ ಸ್ವಚ್ಛತೆಯ ನಾಟಕವೇ ಹೆಚ್ಚು. ಕಾರಣ ದೇಶದ ಅತ್ಯುಚ್ಚ ಪದವಿ ಅಲಂಕರಿಸಿರುವವರೇ ಜಗತ್ತಿನ ಅತೀ ದೊಡ್ಡ ನಾಟಕಕಾರ ತಾನೇ!

ಯುಪಿಎ ಸರಕಾರದ ನಿರ್ಮಲ್ ಭಾರತ್ ಅಭಿಯಾನದಡಿ 2011-2014 ಈ ಮೂರು ವರ್ಷದಲ್ಲಿ 35,000 ಕ್ಕಿಂತಲೂ ಹೆಚ್ಚು ಶೌಚಾಲಯಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಟ್ಟಿಸಲಾಗಿತ್ತು ಹಾಗೂ ಮಾಧ್ಯಮಗಳಲ್ಲಿ ನಿರ್ಮಲ್ ಭಾರತ್ ಯೋಜನೆಯ ಜಾಹೀರಾತುಗಳಿಗಾಗಿ ಯುಪಿಎ ಸರಕಾರ ವೆಚ್ಚ ಮಾಡಿದ್ದು ಕೇವಲ ರೂ.80 ಕೋಟಿ. ಆದರೆ ಎನ್‌ಡಿಎ ಸರಕಾರ ಹಿಂದಿನ ಎರಡೂವರೆ ವರ್ಷದಲ್ಲಿ ಕಟ್ಟಿಸಿರುವುದು ಕೇವಲ 13,000 ಶೌಚಾಲಯಗಳನ್ನು ಮಾತ್ರ, ಆದರೂ ಇದರ ಜಾಹೀರಾತಿಗಾಗಿ ಖರ್ಚಾಗಿದ್ದು ರೂ.350 ಕೋಟಿಗೂ ಹೆಚ್ಚು. ಈ 350 ಕೋಟಿಯಲ್ಲಿ ಅದೆಷ್ಟು ಶೌಚಾಲಯಗಳನ್ನು ಕಟ್ಟಿಸಬಹುದಿತ್ತು ಯೋಚಿಸಿ. ಮೂಲತಃ ಬಿಜೆಪಿ ಸರಕಾರದ ಸ್ವಚ್ಛ ಭಾರತ್ ಯೋಜನೆಯ ಮೂಲ ಉದ್ದೇಶ ಟಿವಿ-ಮಾಧ್ಯಮಗಳನ್ನು ಹಾಗೂ ಅಮಿತಾಭ್ ಬಚ್ಚನ್‌ರನ್ನು ಜಾಹೀರಾತು ಸಂಭಾವನೆ ಮೂಲಕ ಪೋಷಿಸುವುದೇ ಆಗಿರುವಂತಿದೆ.

ಟಿವಿ ಮಾಧ್ಯಮಗಳನ್ನು ಆಡಳಿತ ಪಕ್ಷದ ಪೈಡ್ ಮಾಧ್ಯಮವಾಗಿ ಪರಿವರ್ತಿಸಬೇಕಾದರೆ ಅವರಿಗೆ ಕೋಟ್ಯಂತರ ಮೊತ್ತದ ಸರಕಾರಿ ಜಾಹೀರಾತು ಕೊಡುವುದೊಂದೇ ಪರಿಣಾಮಕಾರಿ ಉಪಾಯ. ಹಾಗೆ ನೋಡಿದರೆ ಹಲವಾರು ಕೇಂದ್ರ ಸರಕಾರದ ಯೋಜನೆಗಳು ಜನಹಿತಕ್ಕಾಗಿ ಜಾರಿಗೊಳಿಸಿದ ಯೋಜನೆಗಳಂತೆ ಹೊರನೋಟಕ್ಕೆ ಕಾಣಿಸುತ್ತಿದ್ದರೂ ನಿಜವಾಗಿ ಈ ಯೋಜನೆಗಳನ್ನು ಹುಟ್ಟುಹಾಕಿರುವುದು ಕೋಟ್ಯಂತರ ಮೌಲ್ಯದ ಜಾಹೀರಾತುಗಳನ್ನು ಮಾಧ್ಯಮಗಳಿಗೆ ಉಣಬಡಿಸಿ ಆ ಮೂಲಕ ಅವುಗಳನ್ನು ಕೈವಶ ಮಾಡಿಕೊಳ್ಳುವ ಮುಸುಕಿನ ಉದ್ದೇಶದ ಯೋಜನೆಗಳೇ ಆಗಿವೆ.

ಯುಪಿಎ ಸರಕಾರದ ನಿರ್ಮಲ ಭಾರತ್ ಅಭಿಯಾನಕ್ಕೆ ರೂಪದರ್ಶಿಯಾಗಿದ್ದ ಹಿಂದಿ ನಾಯಕಿ ವಿದ್ಯಾ ಬಾಲನ್ ಯಾವುದೇ ಸಂಭಾವನೆ ತೆಗೆದುಕೊಳ್ಳದೇ ಸಮಾಜ ಸೇವೆಯ ಉದ್ದೇಶದಿಂದ ಉಚಿತವಾಗಿ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಆದರೆ ಬಿಜೆಪಿ ಸರಕಾರದ ಸ್ವಚ್ಛ ಭಾರತ್ ಯೋಜನೆಯ ರೂಪದರ್ಶಿಯಾದ ಅಮಿತಾಭ್ ಬಚ್ಚನ್ನರಿಗೆ ಕೋಟ್ಯಾಂತರ ಸಂಭಾವನೆ ಕೊಡಲಾಗಿದೆ. ವಿದ್ಯಾಬಾಲನ್‌ರ ಜಾಹೀರಾತಿನಲ್ಲಿ ಯಾರನ್ನೂ ಲೇವಡಿ ಮಾಡದೆ ಸಭ್ಯವಾಗಿ ಹಳ್ಳಿಯ ಮಹಿಳೆಯರಿಗೆ ಶೌಚಾಲಯದ ಮಹತ್ವವನ್ನು ಮನದಟ್ಟು ಮಾಡುವ ದೃಶ್ಯಗಳನ್ನು ತೋರಿಸಲಾಗುತ್ತಿತ್ತು. ಆದರೆ ಬಿಜೆಪಿಯ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್ ಮತ್ತು ಎಳೆಯ ಮಕ್ಕಳ ಮುಖಾಂತರ ಬಯಲು ಶೌಚಕ್ಕೆ ಹೋಗುವ ಹಿರಿಯರನ್ನು ಪೆದ್ದು ಪೆದ್ದಾಗಿ ಲೇವಡಿ ಮಾಡುವ ದೃಶ್ಯಗಳನ್ನು ತೋರಿಸಿ ಸಣ್ಣ ಮಕ್ಕಳಲ್ಲಿ ಹಿರಿಯರನ್ನು ಗೇಲಿ ಮಾಡುವ ದುರಭ್ಯಾಸ ಹುಟ್ಟು ಹಾಕುವಂತಿದೆ. ಹಳ್ಳಿಯ ಮಕ್ಕಳಲ್ಲಿ ಕೀಳುಮಟ್ಟದ ಪ್ರವೃತ್ತಿ ಬೆಳೆಸುವ ಇಂತಹಾ ಬಾಲಿಶ ಜಾಹೀರಾತುಗಳಿಗೆ ಅಮಿತಾಭರು ಹೇಗೆ ಒಪ್ಪಿಕೊಂಡರೋ ಅರ್ಥವಾಗುತ್ತಿಲ್ಲ.

 ನಿಜವಾದ ಸ್ವಚ್ಛತೆ ಗಟಾರು ಮತ್ತು ಒಳಚರಂಡಿ ಕ್ಲೀನ್ ಮಾಡುವುದರಲ್ಲಿ ಇದೆ. ಇದನ್ನು ಸಾವಿರಾರು ವರ್ಷಗಳಿಂದ ನಮ್ಮ ದಲಿತರೇ ಮಾಡಿಕೊಂಡು ಬಂದಿದ್ದಾರೆ. ಈಗ ಮೋದಿ ಮಹಾತ್ಮನ ಸಮಯದಲ್ಲಾದರೂ ಅಮಿತಾಭ್ ಬಚ್ಚನ್, ಮಠಾಧೀಶರು ಮತ್ತು ರೋಟರಿ-ಲಯನ್ಸ್ ಕ್ಲಬ್‌ನವರು ಗಟಾರು ಮತ್ತು ಡ್ರೈನೇಜ್‌ಗಳ ಆಳಕ್ಕೆ ಇಳಿದು ವಿಷವಾಯು ಮತ್ತು ದುರ್ನಾತ ಸೇವಿಸಿ ಆರೋಗ್ಯ ಹಾಳು ಮಾಡಿಕೊಂಡು ಡ್ರೈನೇಜ್ ಸ್ವಚ್ಛ ಮಾಡಿ, ದಲಿತರು ಯುಗಯುಗಗಳಿಂದ ಮಾಡಿಕೊಂಡು ಬಂದಿರುವ ಈ ಕೆಲಸ ಎಷ್ಟು ಚಾಲೆಂಜಿಂಗ್ ಹಾಗೂ ಅಪಾಯಕಾರಿ ಎಂದು ಒಮ್ಮೆ ಅರಿತುಕೊಂಡಿದ್ದರೆ ಒಳ್ಳೆಯದಿತ್ತು. ಕೇವಲ ಪೌರ ಕಾರ್ಮಿಕರು ಮೊದಲೇ ಸ್ವಚ್ಛ ಮಾಡಿ ಹೋಗಿರುವ ಮುಖ್ಯ ರಸ್ತೆಗಳಲ್ಲಿ ಮೇಲ್ಜಾತಿಯವರು ಕಸ ಗುಡಿಸುವ ಪ್ರಹಸನ ಮಾಡಿ ಪೊರಕೆ ಹಿಡಿದು ಫೋಟೊಗೆ ಪೋಸ್ ಕೊಟ್ಟು ಪತ್ರಿಕೆಗಳಲ್ಲಿ ಹಾಕಿಸಿಕೊಳ್ಳುವುದರಿಂದ ಮೋದಿಯ ಸ್ವಚ್ಛ ಭಾರತ್ ಅಭಿಯಾನ ನಿಜ ಅರ್ಥದಲ್ಲಿ ಸಫಲವಾಗಲಾರದು. ಕೇವಲ ಜಾಹೀರಾತುದಾರರು ಸರಕಾರಿ ಹಣದಲ್ಲಿ ಕೊಬ್ಬಿ ಹೋಗುತ್ತಾರೆ ಅಷ್ಟೆ. 

Writer - -ಏಕಲವ್ಯ ಮುಂಡಾಲ

contributor

Editor - -ಏಕಲವ್ಯ ಮುಂಡಾಲ

contributor

Similar News