'ವಿಶ್ವಾಸದ ಮನೆ'ಯಲ್ಲಿ ಅರ್ಥಪೂರ್ಣ ಗಣರಾಜ್ಯೋತ್ಸವ
ಉಡುಪಿ, ಜ.27: ಎಂ.ಪಿ.ಎಲ್ .ಚಾಂಪಿಯನ್ ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಮ್ ಕ್ರಿಕೆಟ್ ತಂಡ ಹಾಗೂ ಎಂ.ಫ್ರೆಂಡ್ಸ್ (Mercy Friends) ಮತ್ತು ಆಪರೇಶನ್ ರುಖಿಯಾ ತಂಡದ ವತಿಯಿಂದ 68ನೆ ಗಣರಾಜ್ಯೋತ್ಸವವನ್ನು ಅನಾಥ ವೃದ್ಧರ ಆರೈಕೆ ಮಾಡುತ್ತಿರುವ 'ವಿಶ್ವಾಸದ ಮನೆ'ಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಗಣರಾಜ್ಯೋತ್ಸವದ ಪ್ರಯುಕ್ತ ನಾವಿಲ್ಲಿ ಸೇರಿದ್ದೇವೆ. ಹಲವಾರು ಆಶ್ರಮಗಳಿಗೆ ಕಾರ್ಯಕ್ರಮ ನೀಡಲು ಹೋಗಿದ್ದೇವೆ. ‘ವಿಶ್ವಾಸದ ಮನೆ’ಯ ಬಗ್ಗೆ ಕೇಳಿ ತಿಳಿದಿದ್ದೆವು. ಆದರೆ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಇಲ್ಲಿಯ ಸದಸ್ಯೆಯಾಗಿದ್ದ ಗುಜರಾತ್‌ನ ಸೂರತ್‌ಮೂಲದ ರುಖಿಯಾ ಎಂಬ ಅನಾಥ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸಿರಾಜ್ ಕೃಷ್ಣಾಪುರ ಎಂಬವರು ಸಾಮಾಜಿಕ ತಾಣದಲ್ಲಿ ಪ್ರಚುರಪಡಿಸಿದ್ದರು. ಬಳಿಕ ಸಿರಾಜ್‌ರ ಮೂಲಕ ‘ಆಪರೇಶನ್ ರುಖಿಯಾ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಆ ಮೂಲಕ ರುಖಿಯ ಅವರ ಕುಟುಂಬಸ್ಥರನ್ನು ಹುಡುಕಿ ಅವರು ಮನೆ ಸೇರುವಂತೆ ಮಾಡಿದ್ದೆವು’ ಎಂದು ನೆನಪಿಸಿದರು.
ವಿಶ್ವಾಸದ ಮನೆಯ ಉಪಾಧ್ಯಕ್ಷ ಮ್ಯಾಥ್ಯೂ ಕ್ಯಾಸ್ತಲಿನೊ ಮಾತನಾಡಿ, ಕೋಸ್ಟಲ್ ಡೈಜೆಸ್ಟ್, ಎಂ.ಫ್ರೆಂಡ್ಸ್ ಮತ್ತು ಆಪರೇಶನ್ ರುಖಿಯಾ ಎಂಬ ಬೇರೆ ಬೇರೆ ಸಂಸ್ಥೆಗಳಿಂದ ಬಹು ದೂರದಿಂದ ಬಂದು ಸಹಕರಿಸಿದ್ದೀರಿ. ನಿಮಗೆಲ್ಲರಿಗೂ ದೇವರ ಆಶೀರ್ವಾದವಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಕೊಸ್ಟಲ್ ಡೈಜೆಸ್ಟ್ ಕ್ರಿಕೆಟ್ ತಂಡದ ಕೋಚ್ ರೆನ್ ಮಾತನಾಡಿ, ಜಾತಿ, ಧರ್ಮ, ಭೇದವಿಲ್ಲದೆ ಅನಾಥರ ಸೇವೆ ಮಾಡುತ್ತಿರುವ ವಿಶ್ವಾಸದ ಮನೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭ ಹಾರೈಸಿದರು.
ಪ್ರೇಮಾ ಮಾರ್ಗರೇಟ್ ಮಾತನಾಡಿ, ರುಖಿಯಾ ತನ್ನ ಮನೆಯನ್ನು ಸೇರಲು ಕಾರಣವಾದ ಎಂ ಫ್ರೆಂಡ್ಸ್‌ನ ಪರಿಶ್ರಮವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮಾಥ್ಯೂ ಕ್ಯಾಸ್ತಲಿನೋ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಗೆ ದೇಣಿಗೆ ನೀಡಲಾಯಿತು.
ನಂತರ ಅಲ್ಲಿ ವಾಸಿಸುತ್ತಿರುವ ವೃದ್ಧರ ಮನೋರಂಜನೆಗಾಗಿ ‘ಬಾಲ್ ಪಾಸಿಂಗ್’ ಸ್ಪರ್ಧೆಯನ್ನು ಎಂ. ಫ್ರೆಂಡ್ಸ್ ಕೋಶಾಧಿಕಾರಿ ಸುಜಾ ಮುಹಮ್ಮದ್ ಅಲಂಕಾರ್ ನಡೆಸಿಕೊಟ್ಟರು.
ಸ್ಪರ್ಧೆಯಲ್ಲಿ ನಿವೃತ್ತ ಉಪನ್ಯಾಸಕರೂ ಆಗಿರುವ ಶಿರ್ವ ಮೂಲದ ಕ್ಲೆಮೆಂಟ್ ಪ್ರಥಮ ಸ್ಥಾನಿಯಾದರು. ದ್ವಿತೀಯ ಸ್ಥಾನವನ್ನು ಉತ್ತರ ಪ್ರದೇಶದ ರಾಧಿಕಾ ಪಡೆದರು. ವಿಜೇತರಿಗೆ ಹೂಗುಚ್ಚ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ವಿಶ್ವಾಸದ ಮನೆಯ ಸದಸ್ಯರೊಂದಿಗೆ ಸಹಭೋಜನ ಮಾಡಲಾಯಿತು.
ಎಂ. ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ದಾವೂದ್ ಬಜಾಲ್, ಮುಹಮ್ಮದ್ ಮರಕಡ, ಅಕ್ಬಲ್ ಅಲಿ, ರಯೀಸ್ ಉಡುಪಿ ಹಾಗೂ ನ್ಯೂಸ್ ಕನ್ನಡ ಡಾಟ್ ಇನ್ ಸುದ್ದಿ ಮಾಧ್ಯಮದ ಆಡಳಿತಾಧಿಕಾರಿ ಮುಖ್ತಾರ್ ಉಚ್ಚಿಲ ಉಪಸ್ಥಿತರಿದ್ದರು.
ಸುಜಾ ಮುಹಮ್ಮದ್ ಸ್ವಾಗತಿಸಿದರು. ಪತ್ರಕರ್ತ ಆರೀಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು. ಆಶಿಕ್ ಕುಕ್ಕಾಜೆ ವಂದಿಸಿದರು.