ಮಂಗಳೂರಿನಲ್ಲಿ ಕಂಬಳದ ಉಳಿವಿಗಾಗಿ ಬೃಹತ್ ಮಾನವ ಸರಪಳಿ
ಕಂಬಳ ಉಳಿವಿಗಾಗಿ ವಿವಿಧ ಸಂಘಟನೆಗಳ ಧರಣಿ
ಮಂಗಳೂರು, ಜ.27: ಕಂಬಳ ನಿಷೇಧವನ್ನು ಹಿಂಪಡೆಯಬೇಕು ಮತ್ತು ಕಂಬಳಕ್ಕೆ ಸಂಬಂಧಿಸಿ ಜ.30ರ ನ್ಯಾಯಾಲಯದ ತೀರ್ಪಿಗೂ ಮುನ್ನ ಕೇಂದ್ರ ಮತ್ತು ರಾಜ್ಯ ಸರಕಾರ ಕಂಬಳ ಉಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಂಬಳ ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರದ ಹಂಪನಕಟ್ಟೆಯ ಜಂಕ್ಷನ್‌ನಲ್ಲಿ ವಿವಿಧ ಸಂಘಟನೆಗಳ ಸಾವಿರಾರು ಕಾರ್ಯಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಲಾವಿದರು ಶುಕ್ರವಾರ ಧರಣಿ ನಡೆಸಿದರು.
ಇದಕ್ಕೂ ಮೊದಲು 'ಕಂಬಳ ಉಳಿಸಿ -ಸಂಸ್ಕೃತ ಉಳಿಸಿ', ಬ್ಯಾನ್ ಪೆಟ-ಸಂಸ್ಕೃತಿ ಉಳಿಸಿ', ತುಳುನಾಡ್ದ ಪೆರ್ಮೆ ಕಂಬಳ-ನಡಪೊಡೆ ನನ ದುಂಬುಲ' ಇತ್ಯಾದಿ ಬರಹಗಳ ಭಿತ್ತಿಪತ್ರ ಹಿಡಿದು ಅಂಬೇಡ್ಕರ್ ವೃತ್ತ ದಿಂದ ಮೆರವಣಿಗೆ ನಡೆಸಿದ ಧರಣಿನಿರತರು ಆ ಬಳಿಕ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮಾನವ ಸರಪಳಿ ನಡೆಸಿ ಗಮನಸೆಳೆದರು.
ಕೋಣಕ್ಕೆ ಎರಡು ಪೆಟ್ಟು ಕೊಟ್ಟರೆ ಹಿಂಸೆಯಾಗುತ್ತದೆ ಎನ್ನುವ 'ಪೆಟ'ದ ಪೇಟಾವನ್ನೇ ಕಿತ್ತೊಗೆಯುವ ಶಕ್ತಿ ಕಂಬಳಕ್ಕಿದೆ. ನಾಳೆ ಈ ಪ್ರಾಣಿ ದಯಾ ಸಂಘದವರು ಹಾಲು ಕರೆಯು ವುದನ್ನೂ ಹಿಂಸೆ ಎಂದು ಪ್ರತಿಪಾದಿ ಸಬಹುದು. ಶ್ರೀಮಂತರ ಕುದುರೆ ರೇಸ್ ಬಗ್ಗೆ ಮಾತೆತ್ತದ 'ಪೆಟ'ದವರು ಕಂಬಳದ ವಿರುದ್ಧ ಧ್ವನಿ ಎತ್ತು ತ್ತಿರುವುದು ವಿಪರ್ಯಾಸ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಬಾಳೆಕೋಡಿ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ತುಳು ಚಿತ್ರಕಲಾವಿದರಾದ ದೇವದಾಸ ಕಾಪಿಕಾಡ್, ವಿಜಯಕುಮಾರ್ ಕೋಡಿಯಾಲ್‌ಬೈಲ್, ನವೀನ್ ಡಿ. ಪಡೀಲ್, ವಿಹಿಂಪ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ವಿದ್ಯಾರ್ಥಿ ಸಂಘದ ಮುಖಂಡ ದಿನಕರ ಶೆಟ್ಟಿ, ಕೆಥೊಲಿಕ್ ಸಭಾದ ಅಧ್ಯಕ್ಷ ಅನಿಲ್ ನೊರೊನ್ಹ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ವಿವಿಧ ಸಂಘಟನೆಗಳ ಮುಖಂಡರಾದ ಸುಂದರ ರೈ ಮಂದಾರ, ಎಂ.ಜಿ. ಹೆಗಡೆ, ಪುಷ್ಪರಾಜ ಜೈನ್, ಯೋಗೀಶ್ ಶೆಟ್ಟಿ ಜೆಪ್ಪು, ಶರಣ್ ಪಂಪ್‌ವೆಲ್, ಹರೀಶ್ ಪೂಂಜಾ, ಚಂದ್ರಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಅಧ್ಯಕ್ಷ ಕೆ.ಎಸ್.ಅಶೋಕ್‌ಕುಮಾರ್ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸತ್ಯಜಿತ್ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.
ಇದು ಕೇಂದ್ರ ಅಥವಾ ರಾಜ್ಯ ಸರಕಾರದ ವಿರುದ್ಧದ ಹೋರಾಟವಲ್ಲ. ನಿಷೇಧ ಹಿಂಪಡೆಯಬೇಕು ಎಂಬ ಹಕ್ಕೊತ್ತಾಯವಷ್ಟೇ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರ ಕಂಬಳದ ಪರ ನಿಲುವು ತಾಳಿದೆ. ಸರಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ನಾವಿಲ್ಲಿ ಮಾಡುತ್ತ್ತಿದ್ದೇವೆ. ನ್ಯಾಯ ನಮ್ಮ ಪರವಿದೆ ಎಂಬ ವಿಶ್ವಾಸವಿದೆ. ನ್ಯಾಯಾಲಯದ ತೀರ್ಪು ನಮ್ಮ ಹೋರಾಟ-ಬೇಡಿಕೆಯ ವಿರುದ್ಧವಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ.
-ನಳಿನ್ ಕುಮಾರ್ ಕಟೀಲು, ಸಂಸದರು
ಕಂಬಳ ಉಳಿಸಲು ಎಲ್ಲ ಕ್ರಮ ಗಳನ್ನೂ ರಾಜ್ಯ ಸರಕಾರ ಮಾಡ ಲಿದೆ. ಕಂಬಳದ ವಿರುದ್ಧ ಎಂತಹ ಕಾನೂನು ರಚನೆಯಾದರೂ ರಕ್ತ ಕೊಟ್ಟಾದರೂ ಸರಿ, ಕಂಬಳ ಉಳಿಸುತ್ತೇವೆ. ಕೇಂದ್ರ ಮತ್ತು ರಾಜ್ಯ ಸರಕಾರ ಕಂಬಳದ ವಿಷ ಯದಲ್ಲಿ ತಾರತಮ್ಯ ಮಾಡು ವುದು ಬೇಡ. ಧರ್ಮ, ಜಾತಿ, ಮತ, ಪಕ್ಷಭೇದ ಮರೆತು ಒಗ್ಗೂ ಡಿರುವುದು ಶ್ಲಾಘನೀಯ.
-ಮೊಯ್ದಿನ್ ಬಾವ, ಶಾಸಕರು
ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೂ ಕಂಬಳಕ್ಕೂ ತುಂಬಾ ವ್ಯತ್ಯಾಸವಿದೆ. 800ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕಂಬಳ ದಲ್ಲಿ ಹಿಂಸೆಯೇ ಇಲ್ಲ. ಇದರಿಂದ ಒಬ್ಬನೇ ಒಬ್ಬ ಸಾವಿಗೀ ಡಾದ ಉದಾಹರಣೆ ಇಲ್ಲ. ಹಾಗಾಗಿ ಕಂಬಳ ಉಳಿಸಲು ಎಲ್ಲ ರೀತಿಯ ಹೋರಾಟ ಮಾಡಲಾಗುವುದು.
-ಬಾರ್ಕೂರು ಶಾಂತಾರಾಮ ಶೆಟ್ಟಿ, ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ