ಆಮ್ ಆದ್ಮಿಯ ಮೊಹಲ್ಲಾ ಕ್ಲಿನಿಕ್ ಯೋಜನೆಗೆ ಕೋಫಿ ಅನ್ನಾನ್ ಶ್ಲಾಘನೆ
ಹೊಸದಿಲ್ಲಿ, ಜ. 27 : ದಿಲ್ಲಿ ಆಮ್ ಆದ್ಮಿ ಸರಕಾರದ ಮಹತ್ವಾಕಾಂಕ್ಷಿ ಮೊಹಲ್ಲಾ ಕ್ಲಿನಿಕ್ ಯೋಜನೆಯನ್ನುವಿಶ್ವಸಂಸ್ಥೆಯ ಮಾಜಿ ಸೆಕ್ರಟರಿ ಜನರಲ್ ಕೋಫಿ ಅನ್ನಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಯೋಜನೆಯಂಗಾಗಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಜನರ ಮನೆಗಳ ಹತ್ತಿರದಲ್ಲಿಯೇ ಮೊಹಲ್ಲಾ ಕ್ಲಿನಿಕ್ಕುಗಳ ಮುಖಾಂತರ ಉಚಿತವಾಗಿ ಒದಗಿಸಲಾಗುತ್ತಿದೆ.
ನೆಲ್ಸನ್ ಮಂಡೇಲಾ ಅವರಿಂದ ಸ್ಥಾಪಿತವಾದ ದಿ ಎಲ್ಡರ್ಸ್ ಎಂಬ ಸಂಘಟನೆಯ ಮುಖ್ಯಸ್ಥರಾಗಿರುವ ಕೋಫಿ ಅನ್ನಾನ್ ಜನವರಿ 25ರಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದಿರುವ ಪತ್ರದಲ್ಲಿಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೆಲ ಸಲಹೆಗಳನ್ನು ನೀಡಿದ್ದಾರಲ್ಲದೆಈ ಯೋಜನೆ ಇತರ ರಾಜ್ಯಗಳಿಗೂ ಮಾದರಿಯಾಗಿದೆ ಎಂದಿದ್ದಾರೆ.
‘‘ನಿಮ್ಮ ಈ ಯೋಜನೆ ಯಶಸ್ವಿಯಾಗುತ್ತಿದೆ ಎಂದು ನಮಗೆ ತಿಳಿದು ಬಂದಿದೆ, ನಿಮ್ಮ ಸಾಧನೆಗೆ ಅಭಿನಂದನೆಗಳು,’’ ಎಂದು ಕೋಫಿ ಅನ್ನಾನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಮೊಹಲ್ಲಾ ಕ್ಲಿನಿಕ್ಕುಗಳು ಎಎಪಿ ಸರಕಾರದ ಪ್ರಮುಖ ಯೋಜನೆಗಳಲ್ಲೊಂದಾಗಿದೆ. ಸರಕಾರ ತನ್ನ ಚುನಾವಣಾ ಪೂರ್ವ ಆಶ್ವಾಸನೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದ್ದರೂ, ತನ್ನ ಈ ಯೋಜನೆಯನ್ನು ಎಎಪಿ ಸರಕಾರ ಪ್ರಮುಖವಾಗಿ ತನ್ನ ವಿಶಿಷ್ಟ ಸಾಧನೆಯೆಂದು ಎಲ್ಲೆಡೆ ಬಿಂಬಿಸುತ್ತಿದೆ.